ನೀರು ಲೋಹದ ಚಿಂತೆ - ಕವನ ಸಂಕಲನ (ಎಂ.ಎ.ಕನ್ನಡ)
ಲೇಖಕರ ಪರಿಚಯ : 'ನೀರು ಲೋಹದ ಚಿಂತೆ' ಕವನ ಸಂಕಲನವನ್ನು ಬರೆದಿರುವವರು " ವಿಜಯಾ ದಬ್ಬೆ " ರವರು. ಇವರು ಆಧುನಿಕ ಮಹಿಳಾ ಕನ್ನಡ ಸಾಹಿತ್ಯದಲ್ಲಿ ಪ್ರಮುಖವಾದ ಲೇಖಕಿ. ಕನ್ನಡದಲ್ಲಿ ಸ್ರ್ತೀ ಸಾಹಿತ್ಯವನ್ನು ಬೆಳೆಸುವಲ್ಲಿ ಇವರ ಪಾತ್ರ ದೊಡ್ಡದು. " ಮಹಿಳಾ ಸಾಹಿತ್ಯವೆಂದರೆ ಅಡುಗೆ ಮನೆ ಸಾಹಿತ್ಯ " ಎಂಬ ಕೂಗು ಕೇಳಿ ಬರುತ್ತಿದ್ದ ಹೊತ್ತಿನಲ್ಲಿ ವಿಜಯಾ ದಬ್ಬೆ ರವರು ಬರವಣಿಗೆಗೆ ಇಳಿದರು. ಸಾಹಿತ್ಯ ವಿಮರ್ಶೆ, ಪ್ರವಾಸ ಕಥನ, ಗ್ರಂಥ ಸಂಪಾದನೆ, ಅನುವಾದ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ದುಡಿದರು. ಇವರನ್ನು ಕೇವಲ ಕವಿ ಎಂದೋ ಅಥವಾ ವಿಮರ್ಶಕಿಯೆಂದೋ ಗುರುತಿಸುವುದು ಕಷ್ಟ. ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿರುವುದರಿಂದ ಇವರನ್ನು ಅನನ್ಯ ಲೇಖಕಿ ಎನ್ನಬಹುದಾಗಿದೆ. ಕನ್ನಡ ಎಂ.ಎ ಅನ್ನು ಮಾನಸ ಗಂಗೋತ್ರಿಯಲ್ಲಿ ಮುಗಿಸಿದ ವಿಜಯ ದಬ್ಬೆಯವರು ಮುಂದೆ ಸುಪ್ರಸಿದ್ಧ ಸಾಹಿತಿಯಾದ ಡಾ. ಹಾ.ಮಾ.ನಾಯಕರ ನೇತೃತ್ವದಲ್ಲಿ " ನಾಗಚಂದ್ರ: ಒಂದು ಅಧ್ಯಯನ " ಎಂಬ ವಿಷಯದ ಮೇಲೆ ಅಧ್ಯಯನ ಕೈಗೊಂಡು ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದರು. ವಿಜಯ ದಬ್ಬೆ ರವರ ಕವನಗಳು ವಿಶಿಷ್ಟತೆಯನ್ನು ಕಾಪಾಡಿಕೊಂಡಿವೆ. ಭಾಷೆಯ ಹಿತಮಿತವಾದ ಬಳಕೆ ಅವರ ಕವನಗಳಲ್ಲಿ ಎದ್ದು ಕಾಣುವ ಗುಣ. ಮತ್ತೊಂದು ಗುಣವೆಂದರೆ ಸಮಾನತೆಯ ದೃಷ್ಟಿಕೋನ. ಸ್ತ್ರೀತ್ವದ ಬಗೆಗಿನ ಪಾಪಪ್ರಜ್ಞೆಯಾಗಲೀ, ಗಂಡ...