ಮಾನಸಿಕ ದೂರ -ಅದರ ಸ್ವರೂಪ ವ್ಯಾಪ್ತಿ
ವ್ಯಕ್ತಿ ಪರಿಚಯ: 19ನೇ ಶತಮಾನದ ಪಾಶ್ಚಾತ್ಯ ಕಾವ್ಯಮೀಮಾಂಸೆಯಲ್ಲಿ ಬೆನೆಡೆಟ್ಟೋ ಕ್ರೋಚೆಯಷ್ಟೇ ಮಹತ್ವನಾದವನು ಎಡ್ವರ್ಡ್ ಬುಲ್ಲೋ . ಈತ ಸಹ ರಸ ಸಿದ್ದಾಂತಕ್ಕೆ ಸಂವಾದಿಯಾದ ಮಾನಸಿಕ ದೂರ (Physical Distance) ಎಂಬ ಸಿದ್ಧಾಂತ ಮಂಡಿಸಿದ್ದಾನೆ. ಇದು ಕಲೆಯಿಂದ ನಾವು ಪಡೆಯಬೇಕಾದ ಅನುಭವ ಮತ್ತು ಕಲೆಗಾರ ಲೋಕ ಸಂಬಂಧದಲ್ಲಿ ಕಲೆಯೊಂದಿಗೆ ಇರಿಸಿಕೊಳ್ಳಬೇಕಾದ ಸಂಬಂಧದ ಕುರಿತಾಗಿದೆ. ಈ ಸ್ವರೂಪವನ್ನು ಬುಲ್ಲೋ ಒಂದು ಹೊಸ ಪರಿಭಾಷೆಯಲ್ಲಿ ಹಿಡಿದಿಡಲು ಪ್ರಯತ್ನಿಸಿ, ಅದನ್ನು "ಮಾನಸಿಕ ದೂರ" ಎಂದು ಕರೆದಿದ್ದಾನೆ. ಇದು ಇಂದಿಗೂ ಪರಿಗಣಿಸಬೇಕಾದ ಒಂದು ಮೌಲಿಕವಾದ ರಸ ತತ್ವವಾಗಿದೆ. ಪೀಠಿಕೆ : ಕನ್ನಡದಲ್ಲಿ Physical Distance ಗೆ ಸಂವಾದಿಯಾಗಿ ಮಾನಸಿಕ ದೂರ ಎಂಬ ಪದವನ್ನು ಬಳಸುತ್ತೇವೆ. ಈ Physical Distance ಎನ್ನುವುದು ಲೋಕ ವಸ್ತುವನ್ನಾಗಲೀ, ಕಲಾವಸ್ತುವನ್ನಾಗಲಿ ಕುರಿತು ಕಲಾವಿದ ಮತ್ತು ಪ್ರೇಕ್ಷಕನ ಮಧ್ಯೆ ಇರಬೇಕಾದ ಒಂದು ವಿಶಿಷ್ಟ ಸಂಬಂಧವನ್ನು ಸೂಚಿಸುತ್ತದೆ. ಲೋಕದಲ್ಲಿ ನಾವು ವಸ್ತುಗಳನ್ನು ತೀರ ಹತ್ತಿರದಲ್ಲಿ ಇರಿಸಿಕೊಂಡು, ಎಂದರೆ ಕೇವಲ ವ್ಯಾವಹಾರಿಕ ಪ್ರಯೋಜನದ ದೃಷ್ಟಿಯಿಂದ ನೋಡುವುದು ನಮಗೆ ಸಹಜವಾದದ್ದು. ಈ ಸಂಬಂಧದಲ್ಲಿ ನಮಗೆ ಸೌಂದರ್ಯಾನುಭವ ಕಾಣಿಸುವುದಿಲ್ಲ. ಏಕೆಂದರೆ ಈ ವ್ಯಾವಹಾರಿಕ ಸಂಬಂಧದಲ್ಲಿ ಲಾಭ, ನಷ್ಟ, ಸುಖ, ದುಃಖ, ಇಷ್ಟ, ಅನಿಷ್ಟ ಇತ್ಯಾದಿ ಭಾವನೆಗಳೇ ಪ್ರಧಾನವಾಗಿರುತ್ತದೆ. ಆದ್ದ...