ಮಾನಸಿಕ ದೂರ -ಅದರ ಸ್ವರೂಪ ವ್ಯಾಪ್ತಿ
ವ್ಯಕ್ತಿ ಪರಿಚಯ:
19ನೇ ಶತಮಾನದ ಪಾಶ್ಚಾತ್ಯ ಕಾವ್ಯಮೀಮಾಂಸೆಯಲ್ಲಿ ಬೆನೆಡೆಟ್ಟೋ ಕ್ರೋಚೆಯಷ್ಟೇ ಮಹತ್ವನಾದವನು ಎಡ್ವರ್ಡ್ ಬುಲ್ಲೋ. ಈತ ಸಹ ರಸ ಸಿದ್ದಾಂತಕ್ಕೆ ಸಂವಾದಿಯಾದ ಮಾನಸಿಕ ದೂರ (Physical Distance) ಎಂಬ ಸಿದ್ಧಾಂತ ಮಂಡಿಸಿದ್ದಾನೆ. ಇದು ಕಲೆಯಿಂದ ನಾವು ಪಡೆಯಬೇಕಾದ ಅನುಭವ ಮತ್ತು ಕಲೆಗಾರ ಲೋಕ ಸಂಬಂಧದಲ್ಲಿ ಕಲೆಯೊಂದಿಗೆ ಇರಿಸಿಕೊಳ್ಳಬೇಕಾದ ಸಂಬಂಧದ ಕುರಿತಾಗಿದೆ.
ಈ ಸ್ವರೂಪವನ್ನು ಬುಲ್ಲೋ ಒಂದು ಹೊಸ ಪರಿಭಾಷೆಯಲ್ಲಿ ಹಿಡಿದಿಡಲು ಪ್ರಯತ್ನಿಸಿ, ಅದನ್ನು "ಮಾನಸಿಕ ದೂರ" ಎಂದು ಕರೆದಿದ್ದಾನೆ. ಇದು ಇಂದಿಗೂ ಪರಿಗಣಿಸಬೇಕಾದ ಒಂದು ಮೌಲಿಕವಾದ ರಸ ತತ್ವವಾಗಿದೆ.
ಪೀಠಿಕೆ :
ಕನ್ನಡದಲ್ಲಿ Physical Distance ಗೆ ಸಂವಾದಿಯಾಗಿ ಮಾನಸಿಕ ದೂರ ಎಂಬ ಪದವನ್ನು ಬಳಸುತ್ತೇವೆ. ಈ Physical Distance ಎನ್ನುವುದು ಲೋಕ ವಸ್ತುವನ್ನಾಗಲೀ, ಕಲಾವಸ್ತುವನ್ನಾಗಲಿ ಕುರಿತು ಕಲಾವಿದ ಮತ್ತು ಪ್ರೇಕ್ಷಕನ ಮಧ್ಯೆ ಇರಬೇಕಾದ ಒಂದು ವಿಶಿಷ್ಟ ಸಂಬಂಧವನ್ನು ಸೂಚಿಸುತ್ತದೆ.
ಲೋಕದಲ್ಲಿ ನಾವು ವಸ್ತುಗಳನ್ನು ತೀರ ಹತ್ತಿರದಲ್ಲಿ ಇರಿಸಿಕೊಂಡು, ಎಂದರೆ ಕೇವಲ ವ್ಯಾವಹಾರಿಕ ಪ್ರಯೋಜನದ ದೃಷ್ಟಿಯಿಂದ ನೋಡುವುದು ನಮಗೆ ಸಹಜವಾದದ್ದು. ಈ ಸಂಬಂಧದಲ್ಲಿ ನಮಗೆ ಸೌಂದರ್ಯಾನುಭವ ಕಾಣಿಸುವುದಿಲ್ಲ. ಏಕೆಂದರೆ ಈ ವ್ಯಾವಹಾರಿಕ ಸಂಬಂಧದಲ್ಲಿ ಲಾಭ, ನಷ್ಟ, ಸುಖ, ದುಃಖ, ಇಷ್ಟ, ಅನಿಷ್ಟ ಇತ್ಯಾದಿ ಭಾವನೆಗಳೇ ಪ್ರಧಾನವಾಗಿರುತ್ತದೆ. ಆದ್ದರಿಂದ ವಸ್ತುವನ್ನು ಈ ವರ್ತುಲದಿಂದ ದೂರ ಇರಿಸಿ ವೈಯಕ್ತಿಕವಲ್ಲದ ಒಂದು ನೆಲೆಯಿಂದ ನಿಂತು ನೋಡಿದಾಗ ನಮಗೆ ಸೌಂದರ್ಯಾನುಭವ ಲಭಿಸುತ್ತದೆ. ಆದುದರಿಂದ ಯಾವ ಒಂದು ನಿಯಮಿತವಾದ ದೂರದಲ್ಲಿ ಇರಿಸಿಕೊಂಡು ನೋಡಿದರೆ ವಸ್ತು ನಮಗೆ ಸೌಂದರ್ಯಾನುಭವಕಾರಿಯಾಗಿ ಗೋಚರಿಸುವುದೋ, ಆ ಒಂದು ದೂರವನ್ನೇ ಎಡ್ವರ್ಡ್ ಬುಲ್ಲೋ ಮಾನಸಿಕ ದೂರ ಎಂದು ಕರೆದಿದ್ದಾನೆ.
ಕಲಾವಲಯದ ಮೂರು ಬಗೆಯ ದೂರುಗಳು:
ಕಲಾವಲಯದಲ್ಲಿ ಈಗಾಗಲೇ ಗುರುತಿಸಲಾಗಿರುವ ಮೂರು ಬಗೆಯ ದೂರುಗಳನ್ನು ಈತ ಮೊದಲು ಹೇಳುತ್ತಾನೆ.
೧. ಕಲಾಕೃತಿಗೂ ಸಹೃದಯನಿಗೂ ಇರುವ ಸಹಜ ಪ್ರಾದೇಶಿಕ ಅಂತರ.
೨. ಕಲಾ ಕೃತಿಯಲ್ಲಿ ನಿರೂಪಿತವಾಗಿರುವ ಪ್ರಾದೇಶಿಕ ಅಂತರ.
೩. ಪ್ರಾಪಂಚಿಕ ಅಂತರ.
ಇವುಗಳಲ್ಲಿ ಮೊದಲನೆಯ ಅಂತರವನ್ನು ಅರಿಸ್ಟಾಟಲ್ ತನ್ನ "ಕಾವ್ಯಮೀಮಾಂಸೆ"ಯಲ್ಲಿ ಆಗಲೇ ಗುರುತಿಸಿದ್ದು, ಶಿಲ್ಪ ಮತ್ತು ಚಿತ್ರಕಲೆಗೆ ಇದು ಅನ್ವಯವಾಗುತ್ತದೆ. ಒಂದು ಶಿಲ್ಪವನ್ನಾಗಲೀ ಅಥವಾ ಚಿತ್ರವನ್ನಾಗಲೀ ಎಷ್ಟು ದೂರದಿಂದ ಮತ್ತು ಯಾವ ಕೋನದಿಂದ ನೋಡಬೇಕೆನ್ನುವುದು ಮುಖ್ಯ ಎಂಬ ಅಂಶ ಇಲ್ಲಿ ಕಂಡು ಬರುತ್ತದೆ.
ಎರಡನೆಯದನ್ನು ಮುಖ್ಯವಾಗಿ ಚಿತ್ರಕಲೆಯಲ್ಲಿ ಮತ್ತು ಸ್ವಲ್ಪಮಟ್ಟಿಗೆ ಚಿತ್ರಕಲೆಯ ಅಲಂಕಾರ ಪಟ್ಟಿಕೆಯಲ್ಲಿ ಕಾಣಬಹುದು.
ಮೂರನೆಯದು ಎಂದರೆ ಪ್ರಾಪಂಚಿಕ ಅಂತರ; ಕಲಾಕೃತಿಗೂ ಮತ್ತು ನಮಗೂ ಇರುವ ಕಾಲದ ಅಂತರ. ಇಲ್ಲಿ ದೂರ ಎನ್ನುವುದನ್ನು ಯಾವ ಅರ್ಥದಲ್ಲಿಯೂ ಉಪಯೋಗಿಸಿಲ್ಲ. ಎಲ್ಲಾ ಕಲಾಕೃತಿಗಳಿಗೂ ಹಿನ್ನೆಲೆಯಾಗಿರುವ ಒಂದು ವಿಶಿಷ್ಟ ಅರ್ಥ ಇದಕ್ಕಿದೆ. ಇದನ್ನು ಮಾನಸಿಕ ದೂರ ಎಂದು ಬುಲ್ಲೋ ಕರೆದಿದ್ದಾನೆ.
ಬುಲ್ಲೋ ಕೊಡುವ ಉದಾಹರಣೆ:
ಸಮುದ್ರದಲ್ಲಿ ದಟ್ಟವಾದ ಮಂಜು ಮುಸುಕಿರುವುದನ್ನು ಕಲ್ಪಿಸಿಕೊಳ್ಳಿ. ಇಂತಹ ಸಂದರ್ಭದಲ್ಲಿ ಸಮುದ್ರಯಾನ ಕೈಗೊಂಡವರಿಗೆ ನೇರವಾಗಿ ಇದು ಭಯಂಕರ. ಆದರೆ ದೂರ ನಿಂತು ನೋಡುವವರಿಗೆ ಇದೊಂದು ಅಪೂರ್ವವಾದ ದೃಶ್ಯ. ಒಂದು ವೇಳೆ ಯಾನದಲ್ಲಿ ಇದ್ದವರಿಗೂ, ಅಪಾಯ ತಪ್ಪಿ ಲೌಕಿಕ ಭಯದಿಂದ ಅವರು ವಿಮುಕ್ತರಾಗಿ, ಆ ಮನೋಭಾವದಿಂದ ಸ್ವಲ್ಪ ದೂರ ನಿಂತು ನೋಡಿದರೆ, ಆಗ ಅವರಿಗೂ ಸೌಂದರ್ಯಾನುಭವ ಉಂಟಾಗುತ್ತದೆ.
ಇನ್ನೊಂದು ಉದಾಹರಣೆ :
ಕಾಡಿನಲ್ಲಿ ಹೋಗುತ್ತಿರುವಾಗ ಥಟ್ಟನೆ ನಮ್ಮೆದುರು ಹುಲಿ ಕಾಣಿಸಿಕೊಂಡರೆ ಭಯ ನಮ್ಮನ್ನು ಆವರಿಸುತ್ತದೆ. ಇದು ಲೌಕಿಕ ಸಹಜವಾದ ಭಾವನೆ. ಅದೇ ಹುಲಿಯ ಅಪಾಯದಿಂದ ನಾವು ಪಾರಾಗಿ ನಿಂತಾಗ ಹುಲಿಯ ಗಂಭೀರ ರೂಪದ ಭವ್ಯತೆ ನಮ್ಮನ್ನು ಮನ ಸೆಳೆಯುತ್ತದೆ ಏಕೆಂದರೆ ಆಗ ನಮಗೂ ಮತ್ತು ಹುಲಿಗೂ ನಡುವೆ ಒಂದು ಲೌಕಿಕವಾದ ಅಂತರ ಏರ್ಪಟ್ಟಿರುತ್ತದೆ ಆಗ ಲೌಕಿಕವಾದ 'ಭಯ' ಎಂಬ ಪ್ರತಿಕ್ರಿಯೆಗೆ ನಾವು ಒಳಗಾಗುವುದಿಲ್ಲ.
ಇಂತಹ ಪ್ರಜ್ಞೆಯನ್ನು ಜೀವನದಲ್ಲಿ ರೂಡಿಸಿಕೊಂಡವರು ಎಂತಹ ವಿಕೋಪದ ಪರಿಸ್ಥಿತಿಯನ್ನಾಗಿ ಶಾಂತವಾಗಿ ಎದುರಿಸಬಲ್ಲರು. ಕಲಾವಲಯದಲ್ಲಿಯೂ ಇದು ಅತ್ಯಂತ ಅವಶ್ಯಕ. ವಸ್ತುವಿಗೂ, ನಮಗೂ ಮಧ್ಯೆ ಉಂಟಾದ ಅಂತರದಿಂದ, ನಮ್ಮ ಮನೋಧರ್ಮದಲ್ಲಾದ ಬದಲಾವಣೆ ಇದು. ನಿತ್ಯ ಜೀವನದ ವೈಯುಕ್ತಿಕ ಆಸೆ, ಆಕಾಂಕ್ಷೆಗಳಿಂದ ಪ್ರೇರಣೆ, ಫಲಗಳಿಂದ ಹೊರಗಿನ ಘಟನೆಗಳನ್ನು ಬೇರ್ಪಡಿಸಿದಾಗ, ಈ ದೂರತ್ವದ ಪರಿಕಲ್ಪನೆ ಸಂಭವಿಸುತ್ತದೆ. ಈ ನಿರ್ಲಿಪ್ತತೆಗೆ ಕಾರಣವಾಗುವ ಮನಸ್ಥಿತಿಯನ್ನು ಬುಲ್ಲೊ ಮಾನಸಿಕ ದೂರ ಎಂದು ಕರೆದಿದ್ದಾನೆ.
ಇದು ಸೌಂದರ್ಯ ತತ್ವದ ತಳಹದಿ :
ಸೌಂದರ್ಯದ ಆಸ್ವಾದನೆ ಸಾಧ್ಯವಾಗುವುದೇ ಈ ಮಾನಸಿಕ ದೂರದ ಅನುಭವದಿಂದ. ಈ ದೃಷ್ಟಿಯನ್ನು ಸಾಮಾನ್ಯವಾಗಿ ವಸ್ತುನಿಷ್ಠ ಎಂದು ಕರೆಯುವುದುಂಟು ಕವಿಗಳಲ್ಲಿ ಕೆಲವರನ್ನು ವಸ್ತುನಿಷ್ಠ ಕವಿಗಳೆಂದು ಮತ್ತು ಕೆಲವರನ್ನು ಭಾವನಿಷ್ಠ ಕವಿಗಳೆಂದು ಕರೆಯುವುದುಂಟು.
ವಸ್ತುನಿಷ್ಠ ಕವಿಗಳು : ಷೇಕ್ಸ್‌ಪಿಯರ್
ಭಾವನಿಷ್ಠ ಕವಿಗಳು : ಪಿ.ಬಿ.ಷೆಲ್ಲಿ ಮೊದಲಾದವರು
'ಸುಂದರ' ಮತ್ತು 'ಪ್ರಿಯ' ಈ ಎರಡು ಪದಗಳ ನಡುವಿನ ವ್ಯತ್ಯಾಸವನ್ನು ತಿಳಿಸುವುದಕ್ಕೆ ಅದು ಓರೆಗಲ್ಲಾಗಿ ನಿಲ್ಲುತ್ತದೆ. 'ಪ್ರಿಯ' ಎನ್ನುವುದು ಲೋಕಿಕ ಪ್ರತಿಕ್ರಿಯೆ. 'ಇದು ನನಗೆ ಪ್ರಿಯವಾದದ್ದು' ಎಂದರೆ ಅದು ಲೌಕಿಕ ಪ್ರಯೋಜನದ ದೃಷ್ಟಿಯಿಂದಲೇ.. ಆದರೆ 'ಸುಂದರ' ಎನ್ನುವುದು ನಿಜವಾದ ಅರ್ಥದಲ್ಲಿ ಈ ಪ್ರಯೋಜನದ ದೃಷ್ಟಿಯನ್ನು ಮೀರಿ ನಿಂತಿರುವ ಅನುಭವ. ಆದುದರಿಂದ ಕಲಾತ್ಮಕ ಸೃಷ್ಟಿ ಕ್ರಿಯೆಯಲ್ಲಿ ಈ ತತ್ವ ಬಹಳ ಮುಖ್ಯವಾದ ಒಂದು ಮೆಟ್ಟಿಲು.
ಅಂದರೆ ವಸ್ತುವನ್ನು ನಮ್ಮತನದಿಂದ ಬೇರ್ಪಡಿಸಿ ಲೌಕಿಕ ಪ್ರಯೋಜನದಿಂದ ದೂರ ನಿಂತಾಗ ಮಾತ್ರ ಈ ಅಂತರ ಏರ್ಪಡುತ್ತದೆ. ನಮಗೆ ಸೌಂದರ್ಯಾನುಭವ ದಕ್ಕುತ್ತದೆ. ಇಲ್ಲಿ ವಸ್ತುವಿನಿಂದ ದೂರ ನಿಲ್ಲುವುದೆಂದರೆ ಪೂರ್ತಿಯಾಗಿ ಸಂಬಂಧ ಕಡಿದುಕೊಳ್ಳುವುದು ಎಂದರ್ಥವಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ನಾಟಕಗಳು. ನಾಟಕದ ಸನ್ನಿವೇಶ, ಪಾತ್ರಗಳು ನಮ್ಮ ಮೇಲೆ ಪ್ರಭಾವವನ್ನು ಬೀರುತ್ತವೆ. ಆದರೆ ನಮ್ಮಿಂದ ಲೌಕಿಕ ಪ್ರತಿಕ್ರಿಯೆಯನ್ನು ಬಯಸುವುದಿಲ್ಲ.
ಕವಿ ಲೋಕಿಕ ಅಂತರದಲ್ಲಿ ನಿಂತಾಗ ಮಾತ್ರ ಆತನಿಗೆ ಸೌಂದರ್ಯಾನುಭವವಾಗಿ ಆತ ಪುನಃ ಸೃಷ್ಟಿಸಲು ಸಾಧ್ಯ ಆ ಕಲಾಕೃತಿಯಲ್ಲಿನ ಸೌಂದರ್ಯವನ್ನು ಆಸ್ವಾದಿಸಲು ಲೌಕಿಕ ಅಂತರದಲ್ಲಿ ನಿಂತು ನೋಡುವ ಶಕ್ತಿಯನ್ನು ಓದುಗ ಪಡೆದಿರಬೇಕು ಒಂದು ಕಲಾ ಕೃತಿಯನ್ನು ಸವಿಯುವಾಗ ಓದುಗನು ಸಹ ಸಿದ್ಧತೆ ಮಾಡಿಕೊಂಡಿರಾಗುತ್ತದೆ ಹೀಗೆ ಸಿದ್ಧವಾದವನೇ ಸಹೃದಯ ಎಂದು ಭಾರತೀಯ ಕಾವ್ಯ ಮೀಮಾಂಸೆ ಹೇಳಿದೆ.
ಮಾನಸಿಕ ದೂರದ ಅಳಿವು - Loss of Distance :
ವಸ್ತುವಿಗೂ ನಮಗೂ ಸಂಬಂಧ ಕಲ್ಪಿಸಲು ಮತ್ತು ಅದನ್ನು ಉಳಿಸಿಕೊಳ್ಳಲು ಅಗತ್ಯವಾದಷ್ಟು ದೂರದಲ್ಲಿ ನಿಂತು ಕೃತಿಕಾರ ಕೃತಿ ರಚಿಸಬೇಕು. ಅದೇ ದೂರದಲ್ಲಿ ನಿಂತು ಓದುಗರು ಅದನ್ನು ಆಸ್ವಾದಿಸಬೇಕು. ಇದು ಬೆಂಕಿ ಕಾಯಿಸಿಕೊಳ್ಳುವಂತೆ..! ಅತಿ ದೂರವಾದರೆ ಶಾಖ ತಗಲುವುದಿಲ್ಲ, ಅತಿ ಹತ್ತಿರವಾದರೂ ಕೈ ಸುಡುತ್ತದೆ. ಯಾವುದೋ ಒಂದು ದೂರದಲ್ಲಿ ನಿಂತಾಗ ಮಾತ್ರ ಹಿತಕರವಾಗುತ್ತದೆ.
ಉದಾಹರಣೆಗೆ ಶಾಕುಂತಲ ನಾಟಕದ ಒಂದು ಸನ್ನಿವೇಶವನ್ನು ತೆಗೆದುಕೊಂಡರೆ, ಕಣ್ವ ಋಷಿ ತನ್ನ ಸಾಕುಮಗಳನ್ನು ಗಂಡನ ಮನೆಗೆ ಕಳಿಸುತ್ತಾ ಕಣ್ಣೀರು ಮಿಡಿಯುವ ಸನ್ನಿವೇಶ. ಇದನ್ನು ನೋಡುತ್ತಿರುವವನೊಬ್ಬ ತಾನು ಇತ್ತೀಚಿಗೆ ಮದುವೆ ಮಾಡಿ ಕಳಿಸಿದ ತನ್ನ ಮಗಳನ್ನು ನೆನೆಸಿಕೊಂಡು ಅಳತೊಡಗಿದರೆ, ಅದು ಕಲಾನುಭವವಲ್ಲ. ಆತ ಕಲೆಯಿಂದ ವಂಚಿತನಾಗಿ ಲೋಕಾನುಭವಕ್ಕೆ ಒಳಗಾಗುತ್ತಾನೆ. ಇದು ಮಾನಸಿಕ ಅಂತರದ ಅಳಿವಿನಿಂದ ಉಂಟಾಗುವ ಪರಿಣಾಮ ಇದೇ Loss of Distance.
ಅನೇಕ ಓದುಗರು ಮತ್ತು ವಿಮರ್ಶಕರು ಈ ಅಂತರವನ್ನು ಕಳೆದುಕೊಳ್ಳುವುದರಿಂದಲೇ ತಪ್ಪು ಹೆಚ್ಚು ಇಡುತ್ತಾರೆ ಇದು ಕಲಾವಿದನಿಗೂ ಮತ್ತು ಅವನ ಸೃಷ್ಟಿ ಕ್ರಿಯೆಗೂ ಅನ್ವಯಿಸುತ್ತದೆ.
ಉಪಸಂಹಾರ :
ಮಾನಸಿಕ ದೂರ ಎಂದರೆ ಕಲೆಯ ಸಾರ ಸರ್ವಸ್ವವಲ್ಲ. ಒಂದು ಕಲೆಯನ್ನು ಸವಿಯಲು ಬೇಕಾಗುವ ಒಂದು ಪೂರ್ವ ಸಿದ್ಧತೆ ಕಲೆಯ ಸೌಂದರ್ಯವನ್ನು ಸಭೆಯನ್ನು ಇದೊಂದು ಮಾರ್ಗ ಸೌಂದರ್ಯಾನುಭವದ ಮೂಲ ತತ್ವ ಲೌಕಿಕ ಪ್ರತಿಕ್ರಿಯೆಯಿಂದ ಮುಕ್ತಿಗೊಳ್ಳುವುದು ಮತ್ತು ವೈಯಕ್ತಿಕ ಅಂಶಗಳನ್ನು ಹೊರದೂಡುವುದು ಸೌಂದರ್ಯಾನುಭವ ಮತ್ತು ಕಲಾ ಸೃಷ್ಟಿಗೆ ಈ ದೂರ ಅನಿವಾರ್ಯ.
(ವಿವಿಧ ಮೂಲಗಳಿಂದ)
*******
ಕೆ.ಎ.ಸೌಮ್ಯ
ಮೈಸೂರು
******
ಮಾನಸಿಕ ದೂರ ಎಂದರೇನು? ಅದರ ಸ್ವರೂಪ ಮತ್ತು ವ್ಯಾಪ್ತಿಯನ್ನು ಬರೆಯಿರಿ
ಎಂ.ಎ.ಕನ್ನಡ (2008 & 2011)
******