ಮಾನಸಿಕ ದೂರ (ಟಿಪ್ಪಣಿ)

ಕನ್ನಡದಲ್ಲಿ 'Physical Distance' ಎನ್ನುವುದಕ್ಕೆ ಸಂವಾದಿಯಾಗಿ 'ಮಾನಸಿಕ ದೂರ', 'ಮನೋದೂರ' ಎಂಬ ಪದ ಬಳಕೆಯಲ್ಲಿದೆ. ಈ 'Physical Distance' ಅಥವಾ 'ಮಾನಸಿಕ ದೂರ' ಎನ್ನುವುದು ಲೋಕ ವಸ್ತುವನ್ನಾಗಲೀ ಅಥವಾ ಕಲಾವಸ್ತುವನ್ನಾಗಲೀ ಕುರಿತು ಕಲಾವಿದ ಮತ್ತು ಪ್ರೇಕ್ಷಕರಿಗೆ ಇರಬೇಕಾದ ಒಂದು ವಿಶಿಷ್ಟ ಸಂಬಂಧವನ್ನು ಸೂಚಿಸುತ್ತದೆ.

ಮಾನಸಿಕ ದೂರ --> ಕಲಾ ವಸ್ತುವನ್ನು ಕುರಿತು ಕಲಾವಿದ ಮತ್ತು ಪ್ರೇಕ್ಷಕರ ನಡುವೆ ಇರುವ ಒಂದು ವಿಶಿಷ್ಟ ಸಂಬಂಧ.

ಲೋಕದಲ್ಲಿ ನಾವು ವಸ್ತುಗಳನ್ನು 'ಹತ್ತಿರ'ದಲ್ಲಿರಿಸಿ, ಅಂದರೆ ಕೇವಲ ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೆ, ನಮಗೆ ಅದರಲ್ಲಿ ಸೌಂದರ್ಯ ಕಾಣಿಸುವುದಿಲ್ಲ. ಏಕೆಂದರೆ ಈ ವ್ಯಾವಹಾರಿಕ ಸಂಬಂಧದಲ್ಲಿ ಲಾಭ, ನಷ್ಟ, ಸುಖ, ದುಃಖ, ಇಷ್ಟ, ಅನಿಷ್ಟ ಇತ್ಯಾದಿ ಭಾವನೆಗಳೇ ಪ್ರಧಾನವಾಗಿರುತ್ತದೆ. 

ಆದ್ದರಿಂದ ಈ ವರ್ತುಲದಿಂದ ವಸ್ತುವನ್ನು 'ದೂರ' ಇರಿಸಿ ವೈಯಕ್ತಿಕವಲ್ಲದ ಒಂದು ನೆಲೆಯಿಂದ ನೋಡಿದಾಗ, ಸೌಂದರ್ಯಾನುಭವ ಲಭಿಸುತ್ತದೆ‌.

ಆದ ಕಾರಣ ಯಾವ ಒಂದು ನಿಯತವಾದ ದೂರದಲ್ಲಿ ಇರಿಸಿಕೊಂಡು ನೋಡಿದರೆ ವಸ್ತು ನಮಗೆ ಸೌಂದರ್ಯಾನುಭವಕಾರಿಯಾಗಿ ತೋರುವುದೋ, ಆ ಒಂದು ದೂರವನ್ನೇ ಎಡ್ವರ್ಡ್ ಬುಲ್ಲೋ "ಮಾನಸಿಕ ದೂರ" ಎನ್ನುತ್ತಾನೆ.

ಇದಕ್ಕಾಗಿ ಬುಲ್ಲೋ ಕೊಡುವ ಒಂದು ಚಿಕ್ಕ ಉದಾಹರಣೆ ಎಂದರೆ, ಕಾಡಿನಲ್ಲಿ ಹೋಗುವಾಗ ಥಟ್ಟನೆ ನಮ್ಮದುರಿನಲ್ಲಿ ಒಂದು ಹುಲಿ ಬಂದರೆ ನಮ್ಮನ್ನು ಭಯ ಆವರಿಸುತ್ತದೆ. ಅದು ಲೋಕಿಕವಾದ ಸಹಜ ಭಾವನೆ. ಆದರೆ ಪಂಜರದಲ್ಲಿ ಇರುವ ಹುಲಿಯನ್ನು ನೋಡುವಾಗ, ಹುಲಿಯ ಉಗ್ರ ರೂಪದ ಭವ್ಯತೆಗೆ ಮನಸೋಲುತ್ತೇವೆ.‌ 

ಏಕೆಂದರೆ ಆಗ ನಮಗೂ ಮತ್ತು ಹುಲಿಗೂ ನಡುವೆ ಒಂದು ಲೌಕಿಕವಾದ ಅಂತರ ಏರ್ಪಟ್ಟಿರುತ್ತದೆ. ಪಂಜರದಲ್ಲಿರುವ ಹುಲಿಯಿಂದ ನಮಗೆ ಯಾವುದೇ ಅಪಾಯ ಎದುರಾಗದ ಕಾರಣ, ನಮ್ಮ ಮನಸ್ಸು ಹುಲಿಯ ಸೌಂದರ್ಯವನ್ನು ಸವಿಯುತ್ತದೆ. ಅದೇ ಕಾಡಿನಲ್ಲಿ ಸಿಕ್ಕ ಹುಲಿಯಿಂದ ನಮ್ಮ ಮನಸ್ಸು ಭೀತಿಗೊಳಗಾಗುವ ಕಾರಣ, ಬೇರೆ ಏನೂ ಯೋಚಿಸಲು ಹೋಗುವುದಿಲ್ಲ. ಆ ಅಪಾಯದಿಂದ ಪಾರಾದರೆ ಸಾಕು ಎನ್ನುವ ಭಾವ ಒಂದು ಮಾತ್ರ ಉದಯಿಸುತ್ತದೆ.

ಈ ಎರಡು ಪ್ರಕರಣದಲ್ಲಿರುವ ವಸ್ತು ಹುಲಿ. 

ಈ ಹುಲಿಯನ್ನು ದೂರವಿದ್ದಾಗ ನೋಡಿ ಸಂತೋಷ ಪಡುತ್ತೇವೆ. ಹತ್ತಿರವಿದ್ದಾಗ ಹೆದರಿಕೊಳ್ಳುತ್ತೇವೆ. ಸಂದರ್ಭಕ್ಕೆ ತಕ್ಕ ಹಾಗೆ ನಮ್ಮ ಭಾವನೆಗಳೂ ಬದಲಾಗುತ್ತವೆ. 

ಇಂತಹ ಪ್ರಜ್ಞೆಯನ್ನು ಜೀವನದಲ್ಲಿ ಅಳವಡಿಸಿ ರೂಢಿಸಿಕೊಂಡವರು, ಎಂತಹ ವಿಕೋಪದ ಪರಿಸ್ಥಿತಿಯನ್ನಾಗಲಿ, ಶಾಂತವಾಗಿಯೇ ಎದುರಿಸಬಲ್ಲರು. ಕಲಾವಲಯದಲ್ಲಂತೂ ಇದು ಅತ್ಯಂತ ಅವಶ್ಯಕ ಎನ್ನುತ್ತಾನೆ ಬುಲ್ಲೊ.

ವಸ್ತುವಿಗೂ ನಮಗೂ ಮಧ್ಯೆ ಉಂಟಾದ ಅಂತರದಿಂದ ನಮ್ಮ ಮನೋಧರ್ಮದಲ್ಲಿ ಆಗುವ ಬದಲಾವಣೆ ಇದು. ನಿತ್ಯ ಜೀವನದ ವೈಯಕ್ತಿಕ ಆಸೆ ಆಕಾಂಕ್ಷೆಗಳಿಂದ, ಫಲಗಳಿಂದ ಹೊರಗಿನ ಘಟನೆಗಳನ್ನು ಬೇರ್ಪಡಿಸಿದಾಗ ಈ ದೂರತ್ವದ ಪರಿವರ್ತನೆ ಸಂಭವಿಸುತ್ತದೆ.

ಈ ನಿರ್ಲಿಪ್ತೆತೆಗೆ ಕಾರಣವಾಗುವ ಮನಸ್ಥಿತಿಯನ್ನೇ ಬುಲ್ಲೊ "ಮಾನಸಿಕ ದೂರ" ಎಂದು ಕರೆದಿದ್ದಾನೆ.

********

ಕೆ.ಎ.ಸೌಮ್ಯ 

ಮೈಸೂರು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)