ವ್ಯಕ್ತಿತ್ವ ನಿರಸನ (ಟಿಪ್ಪಣಿ)

ಕವಿ ಹಿಂದಿನ ಸಂಪ್ರದಾಯದೊಡನೆ ಎಂತಹ ಸಂಬಂಧವನ್ನು ಇಟ್ಟುಕೊಳ್ಳುತ್ತಾನೆ ಎನ್ನುವುದು ಮುಖ್ಯ. ಹಿಂದಿನದೆಲ್ಲ ಒಪ್ಪಿಕೊಂಡು ಒಟ್ಟಾಗಿ ನುಂಗಬೇಕೆಂದಲ್ಲ ಅಥವಾ ಹಿಂದಿನದಲ್ಲಿಯೇ ತನಗೆ ಬೇಕಾದ ಒಂದೆರಡು ಆರಿಸಿಕೊಂಡು ಅದನ್ನು ಅನುಕರಿಸುತ್ತಾನೆ ಎಂದಲ್ಲ. ತನ್ನ ನಾಡಿನಲ್ಲಿ ಹರಿದು ಬರುತ್ತಿರುವ ಮುಖ್ಯ ಪ್ರವಾಹವನ್ನು ಆತ ಪ್ರಜ್ಞಾಪೂರ್ವಕವಾಗಿ ಕಾಣಬೇಕು. ಆತ ತನ್ನ ವೈಯುಕ್ತಿಕ ವೈಚಿತ್ರಗಳನ್ನು ದಾಟಿ ಮೇಲೇರಬೇಕಾಗುತ್ತದೆ. ತನ್ನ ಪರಿಮಿತ ವ್ಯಕ್ತಿತ್ವದ 'ಅಹಮ್' ಅನ್ನು ಕಳೆದುಕೊಂಡು ಸಮಷ್ಟಿ ಮನಸ್ಸಿಗೆ ತನ್ನನ್ನು ಅರ್ಪಿಸಿಕೊಳ್ಳಬೇಕಾಗುತ್ತದೆ. ತನ್ನ ವೈಯುಕ್ತಿಕತೆಗಿಂತಲೂ ಹೆಚ್ಚು ಮೌಲ್ಯವುಳ್ಳ ಆ ಇನ್ನೊಂದಕ್ಕೆ ತನ್ನನ್ನು ನಿರಂತರವಾಗಿ ಅರ್ಪಿಸಿಕೊಳ್ಳುತ್ತಾ ಹೋಗುತ್ತಾನೆ ಕವಿ. ನಿಜವಾಗಿ ಕಲಾವಿದನ ಪ್ರಗತಿ ಈ ಆತ್ಮಾರ್ಪಣೆಯನ್ನು ಅವಲಂಬಿಸಿದೆ.

ಇದೇ ವ್ಯಕ್ತಿತ್ವ ನಿರಸನ ಸಿದ್ಧಾಂತ.

ಅಂದರೆ ಇದು ವ್ಯಕ್ತಿತ್ವದ ನಾಶವಲ್ಲ. ಬದಲಿಗೆ ಪರಿಮಿತವಾದ ವೈಯುಕ್ತಿಕ ವೈಚಿತ್ರದಿಂದ ಪಾರಾಗಿ, ಇನ್ನೊಂದು ದೊಡ್ಡ ತತ್ವಕ್ಕೆ ತನ್ನನ್ನು ಅರ್ಪಿಸಿಕೊಳ್ಳುವುದು. ಇಂತಹ ಸಮರ್ಪಣೆಯಿಂದಲೇ ಮಹತ್ತರವಾದ ಕಾವ್ಯವು ಸೃಷ್ಟಿಯಾಗುತ್ತದೆ ಎನ್ನುತ್ತಾನೆ ಎಲಿಯಟ್.

ಕಾವ್ಯಕ್ಕೂ ಕವಿಗೂ ಇರುವ ಸಂಬಂಧ ಇಲ್ಲಿ ಬರುತ್ತದೆ. ಪ್ರಾಮಾಣಿಕ ವಿಮರ್ಶೆ ಕಾವ್ಯವನ್ನು ಕುರಿತು ಇರುತ್ತದೆಯೇ ಹೊರತು ಕವಿಯನ್ನಲ್ಲ.

"Honest Criticism is directed not upon the poet but upon the poetry" 

ಕಕವಿಯ ಪರಿಮಿತ ವ್ಯಕ್ತಿತ್ವವೇ ಬೇರೆ. ಆತನಿಂದ ಸೃಷ್ಟಿಯಾಗುವ ಕಾವ್ಯವೇ ಬೇರೆ. ಕವಿಯ ವ್ಯಕ್ತಿತ್ವ ಕಾವ್ಯ ಸೃಷ್ಟಿಯಲ್ಲಿ ನಿಮಿತ್ತ ಮಾತ್ರವಾಗುತ್ತದೆ. 

ಇದಕ್ಕಾಗಿ ಎಲಿಯಟ್ ಒಂದು ಉದಾಹರಣೆ ಕೊಡುತ್ತಾನೆ.

ಕೆಲವು ರಾಸಾಯನಿಕ ಕ್ರಿಯೆ ನಡೆಯುವಾಗ ಆ ಕ್ರಿಯೆ ಬೇಗ ನಡೆಯಲು ವೇಗವರ್ಧಕ (Catalyst) ಬಳಸುತ್ತಾರೆ. ಆಗ ಆ catalyst ತನ್ನಲ್ಲಿ ತಾನು ಯಾವ ಬದಲಾವಣೆಯನ್ನೂ ಮಾಡಿಕೊಳ್ಳದೆ, ರಾಸಾಯನಿಕ ಕ್ರಿಯೆಯನ್ನು ಬೇಗ ಮಾಡಿಕೊಡಲು ಸಹಾಯ ಮಾಡುತ್ತದೆ.

ಇಲ್ಲಿ ಒಂದೇ ವ್ಯಕ್ತಿತ್ವದ ಎರಡು ನಿಲುವುಗಳನ್ನು ಹೇಳಿದ್ದಾನೆ.

          * A man who suffers

          * The mind which creates

ಮೊದಲನೆಯದು ಲೋಕಭಾಷೆ ಅನುಭವಿಸುತ್ತಿರುವ ವ್ಯಕ್ತಿತ್ವ. ಈ ಲೋಕದ ಕೋಪ, ತಾಪ, ರಾಗ, ದ್ವೇಷಗಳನ್ನು ಆತ ಅನುಭವಿಸುತ್ತಿರುತ್ತಾನೆ. ಆದರೆ ಅವುಗಳನ್ನು ಅಭಿವ್ಯಕ್ತಿಸುವಾಗ ಆತ ನಿಲ್ಲುವ ನಿಲುವೇ ಬೇರೆ. 

ಅದು The mind which creates. 

ಕಲಾವಿದ ಪರಿಪೂರ್ಣನಾದಷ್ಟು ಇವೆರಡು ನಿಲುವುಗಳು ಬೇರೆ ಆಗುತ್ತಾ ಹೋಗುತ್ತವೆ‌. ಕಚ್ಚಾ ಸಾಮಗ್ರಿಯಾದ ಲೋಕಭಾವವನ್ನು ಕವಿ ಮನಸು ಅರಗಿಸಿಕೊಂಡು ಪರಿವರ್ತಿಸುತ್ತದೆ.

ಮಾತು ಭಾರತೀಯ ದೃಷ್ಟಿಗೆ ಸಂವಾದಿಯಾಗಿದೆ. ಕಾವ್ಯದಲ್ಲಿ ಬರುವುದು ಲೋಕ ಭಾವವಲ್ಲ. ಲೋಕ ಭಾವ ಕವಿಯ ಮನಸ್ಸನ್ನು ಹೊಕ್ಕು ರಸ ವಸ್ತು ಆಗುತ್ತದೆ. ಅಂದರೆ ವೈಯುಕ್ತಿಕತೆಯನ್ನು ಕಳೆದುಕೊಂಡು ಸಾಧಾರಣೀಕೃತ ಆಗುತ್ತದೆ. ಇದನ್ನೇ ಎಲಿಯಟ್ ವ್ಯಕ್ತಿತ್ವ ನಿರಸನ ಎನ್ನುತ್ತಿರುವುದು. 

ಕವಿ ಲೋಕದಲ್ಲಿ ಅನುಭವಿಸುವ ಭಾವಕ್ಕೂ, ಕಲಾತ್ಮಕವಾಗಿ ಅನುಭವಿಸುವ ಭಾವಕ್ಕೂ ವ್ಯತ್ಯಾಸವಿದೆ. ಅಂದರೆ ಇಲ್ಲಿ ವ್ಯಕ್ತವಾಗುವುದು ಕವಿಯ ವೈಯುಕ್ತಿಕ ಭಾವವಲ್ಲ. ಈ ಭಾವ ಲೋಕ ಭಾವಕ್ಕಿಂತ ಭಿನ್ನವಾದ ಹೆಚ್ಚು ಸಂಕೀರ್ಣವುಳ್ಳದ್ದು.

ಕಾಕಾವ್ಯ ಎಂಬುದು ಕವಿಯ ವ್ಯಕ್ತಿತ್ವದ ಪ್ರದರ್ಶನವಲ್ಲ, ಬದಲಿಗೆ ವ್ಯಕ್ತಿತ್ವ ನಿರಸನ.ಅಂದರೆ ವ್ಯಕ್ತಿತ್ವದ ನಾಶವಲ್ಲ. ಭಾವವಿದ್ದರೂ ಅವು ಪರಿವರ್ತವಾಗಿರುತ್ತದೆ, ಲೌಕಿಕ ಪ್ರತಿಕ್ರಿಯೆಯಿಂದ ಬಿಡುಗಡೆಗೊಂಡಿರುತ್ತದೆ. ಕವಿ ತನ್ನನ್ನು ಸಂಪೂರ್ಣವಾಗಿ ಕೃತಿಗೆ ಸಮರ್ಪಿಸಿಕೊಳ್ಳದ ಹೊರತು ಈ ನಿರಸನ ಸಾಧ್ಯವಿಲ್ಲವೆಂದು ಎಲಿಯಟ್ ಹೇಳುತ್ತಾನೆ.

*********

ಕೆ.ಎ.ಸೌಮ್ಯ 

ಮೈಸೂರು



ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)