ಹಲ್ಮಿಡಿ ಶಾಸನದ ಐತಿಹಾಸಿಕ, ಭಾಷಿಕ, ಸಾಂಸ್ಕೃತಿಕ ಮಹತ್ವ

ಪೀಠಿಕೆ

ಕನ್ನಡ ಶಾಸನಗಳಲ್ಲಿ ಹಲ್ಮಿಡಿ ಶಾಸನವು ತನ್ನ ಕಾಲದ ದೃಷ್ಟಿಯಿಂದ ಮಹತ್ವದ ಸ್ಥಾನ ಪಡೆದಿದೆ. ಶಾಸನಗಳ ಅಧ್ಯಯನಕ್ಕೆ ತೊಡಗುವ ಯಾವ ವಿದ್ಯಾರ್ಥಿಯೇ ಆಗಲಿ, ಈ ಶಾಸನವನ್ನು ಅದರ ಪ್ರಾಚೀನತೆಯ ಕಾರಣಕ್ಕಾಗಿ ಪರಿಚಯಿಸಿಕೊಂಡೇ ಮುಂದೆ ಸಾಗಬೇಕಿದೆ. 

ಹಲ್ಮಿಡಿ ಶಾಸನವು ಒಂದು ದಾನಶಾಸನವಾಗಿದೆ. 

ಈ ಶಾಸನವು ಬೇಲೂರು ತಾಲ್ಲೂಕಿನ ಹನುಮಿಂಡಿ ಗ್ರಾಮದಲ್ಲಿ ದೊರೆತಿದೆ. ಗ್ರಾಮಸ್ಥರಿಂದ ಅಲಕ್ಷ್ಯಕ್ಕೆ ಒಳಗಾಗಿದ್ದ ಶಾಸನವನ್ನು ಮೈಸೂರು ಶಾಸನ‌ ಇಲಾಖೆಯು ಸಂರಕ್ಷಿಸಿದೆ. ಹಲ್ಮಿಡಿ ಶಾಸನದ ಪಾಠವನ್ನು ಹಲವು ಬಾರಿ ಪ್ರಕಟಿಸಲಾಗಿದೆ. 

  • ಮೊದಲ ಬಾರಿ ಶಾಸನದ ಪಾಠ ಪ್ರಕಟವಾದದ್ದು

ಮೈಸೂರು ಶಾಸನ ಇಲಾಖೆಯ 1936ರ ವಾರ್ಷಿಕ ವರದಿಯಲ್ಲಿ.   

ಎರಡನೇ ಬಾರಿ ಶಾಸನದ ಪಾಠ ಪ್ರಕಟವಾದದ್ದು

ಸ್ವಲ್ಪ ಪರಿಷ್ಕಾರದೊಂದಿಗೆ 'ಪ್ರಬುದ್ಧ ಕರ್ನಾಟಕ'ದ ಮಾಲಿಕೆಯಲ್ಲಿ. 

ಮೂರನೇ ಬಾರಿ ಶಾಸನದ ಪಾಠ ಪ್ರಕಟವಾದದ್ದು

ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ 'ಎಪಿಗ್ರಾಫಿಯಾ ಕರ್ನಾಟಿಕಾ'ದ ಪರಿಷ್ಕೃತ ಆವೃತ್ತಿಯಲ್ಲಿ. ಈ ಪಾಠವು ಪ್ರಬುದ್ಧ ಕರ್ನಾಟಕ'ದಲ್ಲಿ ಪ್ರಕಟಿಸಿದ ಶಾಸನ ಪಾಠಕ್ಲೆ ಅನುಗುಣವಾಗಿದೆ.  

ನಾಲ್ಕನೆ ಬಾರಿ ಶಾಸನದ ಪಾಠ ಪ್ರಕಟವಾದದ್ದು 

ಜಿ.ಎಸ್.ಗಾಯಿ ಅವರ 'ಹಲ್ಮಿಡಿ ಶಾಸನ: ಒಂದು ಅಧ್ಯಯನ' ಎಂಬ ಲೇಖನದಲ್ಲಿ ಪ್ರಕಟವಾಗಿದೆ. 

ಶಾಸನ ಪ್ರಕಟಿಸಿದವರು : ಎಂ.ಎಚ್.ಕೃಷ್ಣ

ಶಾಸನ ದೊರೆತ ಸ್ಥಳ : ಹಲ್ಮಿಡಿ ಎಂಬ ಒಂದು ಸಣ್ಣ ಗ್ರಾಮದಲ್ಲಿ ಈ ಶಾಸನ ಕಂಡು ಬಂದಿದೆ. ಬೇಲೂರಿನಿಂದ ಚಿಕ್ಕಮಗಳೂರಿಗೆ ಹೋಗುವ ಮಾರ್ಗಮಧ್ಯದಲ್ಲಿ ಮುಖ್ಯರಸ್ತೆಗೆ ಎರಡು ಮೈಲಿ ದೂರದ ಯಗಚಿ ನದಿಯ ದಂಡೆಯ ಮೇಲೆ ಈ ಶಾಸನ ದೊರೆತಿದೆ. ಗ್ರಾಮಸ್ಥರಿಂದ ಅಲಕ್ಷ್ಯಕ್ಕೊಳಗಾಗಿದ್ದ ಈ ಶಾಸನವನ್ನು ಮೈಸೂರು ಶಾಸನ ಇಲಾಖೆ ಸಂರಕ್ಷಿಸಿದೆ. 

ಶಾಸನದ ವರ್ಣನೆ : ಶಾಸನ ಶಿಲೆಯು ನಾಲ್ಕು ಅಡಿ ಎತ್ತರ, ಒಂದು ಅಡಿ ಅಗಲ ಮತ್ತು ಒಂಬತ್ತು ಅಂಗುಲ ದಪ್ಪವಾಗಿದೆ. 

ಎತ್ತರ : ನಾಲ್ಕು ಅಡಿ

ಅಗಲ : ಒಂದು ಅಡಿ

ದಪ್ಪ : ಒಂಬತ್ತು ಅಂಗುಲ

ಶಾಸನದ ಕಲ್ಲು‌ : ಬಳಪದ ಕಲ್ಲು (ಹಾಗಾಗಿ ಅಕ್ಷರಗಳು ಸ್ಫುಟವಾಗಿ ಕಾಣುತ್ತವೆ) 

ಶಾಸನದ ಲಿಪಿ : ಶಾಸನದ ಲಿಪಿಯು ಸ್ವಲ್ಪ ಮಟ್ಟಿಗೆ ಪಶ್ಚಿಮ ಘಟ್ಟಗಳ ಗವಿಯಲ್ಲಿ ದೊರೆತಿರುವ ಶಾತವಾಹನ ಚಕ್ರವರ್ತಿಗಳ ಶಾಸನಗಳಲ್ಲಿ ಬಳಕೆಯಾಗಿರುವ 'ಗವಿಯ ಲಿಪಿ'ಯನ್ನು ಹೋಲುತ್ತವೆ‌. ಕೆಲವು ಕಡೆಗಳಲ್ಲಿ ಕದಂಬ ಕಾಕುತ್ಸ್ಥವರ್ಮನ 'ತಾಳಗುಂದ ಶಾಸನ'ವನ್ನು ಹೋಲುತ್ತದೆ. ಅಲ್ಲದೇ ಇದರಿಂದ ಆಗಿನ ಕಾಲದಲ್ಲಿ ಎರಡು ಬಗೆಯ ಬರಹದ ಶೈಲಿಗಳನ್ನು ಬಳಸುತ್ತಿದ್ದರು ಎದು ಸೂಚಿಸುತ್ತದೆ. 

ಶಾಸನದ ಕಾಲ : ಶಾಸನದ ಲಿಪಿಯ ವೈಲಕ್ಷಣಗಳಿಂದ ಹಲ್ಮಿಡಿ ಶಾಸನವು ಹಲಸಿಯ ತಾಮ್ರಪಟಗಳು ಮತ್ತು ಅಣಜಿಯ ಶಿಲಾಶಾಸನಗಳು ಸೇರಿದ್ದ ಕಾಲಕ್ಕೆ ಸೇರಿದೆಯೆಂದು ಹೇಳಬಹುದು.‌ 

"ಈ ಶಾಸನದಲ್ಲಿ ಅದರ ಕಾಲವನ್ನು ಕೊಟ್ಟಿಲ್ಲ. ಅದರಲ್ಲಿ ಹೇಳಿರುವ ವಿಷಯದಿಂದ ಕಾಲವನ್ನು ನಿರ್ಣಯಿಸಬೇಕಾಗಿದೆ. ಇದರಲ್ಲಿ ಹೇಳಿರುವ ದೊರೆ ಕಾಕುತ್ಸ್ಥವರ್ಮ. ಹಾಗಾಗಿ ಈ ಶಾಸನವು ಸುಮಾರು ಕ್ರಿ.ಶ.450 ರಲ್ಲಿ ಬರೆದುದಾಗಿ ನಿರ್ಣಯಿಸಬಹುದು" - ಎಂ.ಎಚ್.ಕೃಷ್ಣ, ಪ್ರಬುದ್ಧ ಕರ್ನಾಟಕ.

ಈ ವಿಷಯದಲ್ಲಿ ವಿದ್ವಾಂಸರ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಎಂ.ಎಚ್.ಕೃಷ್ಣ ಅವರು ಗೊತ್ತು ಮಾಡಿರುವ ಕಾಲ ಕ್ರಿ.ಶ.450 ಈಗ ಬಹುಜನರಿಂದ ಮಾನ್ಯತೆ ಪಡೆದಿದೆ. 

ಶಾಸನದ ಕಾಲದ ಬಗ್ಗೆ ಉಳಿದ ವಿದ್ವಾಂಸರ ಅಭಿಪ್ರಾಯಗಳು

  • ಗೋವಿಂದ ಪೈ : ತಾವು ನಿಶ್ಚಯಿಸಿರುವ ಕಾಕುತ್ಸ್ಥವರ್ಮನ ಆಳ್ವಿಕೆಯ ಕಾಲಕ್ಕೆ ಅನುಗುಣವಾಗಿ ಈ ಶಾಸನ ಕ್ರಿ.ಶ 265 ರಿಂದ 282 ರ ನಡುವೆ ಹುಟ್ಟಿದೆ.
  • ಎನ್. ಲಕ್ಷ್ಮೀನಾರಾಯಣ ರಾವ್ : ಲಿಪಿಯ ಆಧಾರದ ಮೇಲೆ ಹಲ್ಮಿಡಿ ಶಾಸನವು ಬಾದಾಮಿಯ ಮಂಗಳೇಶನ ಗುಹಾ ಶಾಸನಕ್ಕಿಂತಾ ಈಚಿನ ಕಾಲದ್ದು. 
  • ಡಿ.ಸಿ.ಸರ್ಕಾರ್ಲಿಪಿಯ ಆಧಾರದ ಮೇಲೆ ಕ್ರಿ.ಶ ಆರನೇ ಶತಮಾನದ ಅಂತ್ಯ ಭಾಗದ ಶಾಸನವೆಂದು ತಿಳಿಸಿದ್ದಾರೆ. ಇವರು ಎನ್. ಲಕ್ಷ್ಮೀನಾರಾಯಣ ರಾವ್ ಅವರ ಅಭಿಪ್ರಾಯವನ್ನು ಸಮರ್ಥಿಸಿರುವ ಹಾಗೆ ಕಾಣುತ್ತದೆ.
ಶಾಸನದ ಕರ್ತೃ : ಶಾಸನದ ಹದಿಮೂರನೆಯ ಸಾಲಿನಲ್ಲಿ 'ಅಳು ಕದಂಬನ್' ಎಂಬ ಲಿಖಿತವಿದೆ. ಇವನೇ ಈ ದಾನಶಾಸನ ಬರೆಯಿಸಿದವನೆಂದು ಎಂ.ಎಚ್.ಕೃಷ್ಣ ಊಹಿಸಿದ್ದಾರೆ. ಅವರ ಊಹೆಯಂತೆ‌ ಈತ ಭವಾರಿ ಕುಲಕ್ಕೆ ಸೇರಿದವನು. ಕಾಕುತ್ಸ್ಥವರ್ಮನ ಮಗಳಾದ ಲಕ್ಷಿ ಮತ್ತು ಪಶುಪತಿಯ ಮಗನೇ ಅಳುಕದಂಬ. ಈತನೇ ಶಾಸನ ಬರೆಯಿಸಿದವನು.‌

ಶಾಸನದ ಸಾಂಸ್ಕೃತಿಕ-ಭಾಷಿಕ-ಐತಿಹಾಸಿಕ ಮಹತ್ವ

ಹಲ್ಮಿಡಿ ಶಾಸನ ಚಿಕ್ಕದಾದರೂ ರಾಜಕೀಯ, ಸಾಮಾಜಿಕ ಮತ್ತು ಭಾಷಿಕ ದೃಷ್ಟಿಯಿಂದ ಮಹತ್ವದ ಶಾಸನ ಎಂದು ತಿಳಿಯಬೇಕಾಗಿದೆ.
  • ಬಾದಾಮಿಯ ಚಾಳುಕ್ಯರ ದೊರೆಯಾದ 'ಮಂಗಳೇಶ'ಎಂಬುವವನೇ (ಕ್ರಿ.ಶ. ಏಳನೇ ಶತಮಾನ) ಕೆತ್ತಿಸಿದ ಶಿಲಾಶಾಸನವೇಅತ್ಯಂತ ಪ್ರಾಚೀನವಾದದ್ದು ಎಂದು ಈವರೆಗೂ ತಿಳಿಲಾಗಿತ್ತು. ಆದರೆ ಹಲ್ಮಿಡಿ ಶಾಸನ ದೊರೆತ ನಂತರ ಕನ್ನಡ ಭಾಷೆಯ ಅತ್ಯಂತ ಪ್ರಾಚೀನ ಶಾಸನ ಎಂಬ ಮನ್ನಣೆಯನ್ನು ಅದು ಪಡೆದುಕೊಂಡಿತು. ಬಾದಾಮಿಯ ಶಾಸನಕ್ಕೆ ಎರಡನೇ ಸ್ಥಾನ ಪ್ರಾಪ್ತವಾಯಿತು.
  • ಬನವಾಸಿಯ ಕದಂಬರ ಕಾಲಕ್ಕೆ ಸೇರಿದ ಅತಿ ಪುರಾತನ ಶಾಸನಗಳಲ್ಲಿ ಒಂದು ಈ ಹಲ್ಮಿಡಿ ಶಾಸನ.
  • ಈ ಶಾಸನದಲ್ಲಿ ಕದಂಬರು, ಪಲ್ಲವರು, ಕಳಭ್ರರು, ಆಳುಪರು, ಬಾಣರು ಮೊದಲಾದ ರಾಜಮನೆತನಗಳ ಪ್ರಸ್ತಾಪವಿದ್ದು, ಇವರ ನಡುವಿನ ರಾಜಕೀಯ ‌ಸಂಬಂಧವನ್ನು ತಿಳಿಯಬಹುದಾಗಿದೆ.
  • ಕದಂಬರು, ಪಲ್ಲವರು ದೊಡ್ಡ ರಾಜ ಮನೆತನದವರಾದ್ದರಿಂದ ಹಲ್ಮಿಡಿ ಶಾಸನದಿಂದ ಇವರ ಬಗ್ಗೆ ತಿಳಿಯುವಂಥದ್ದು ಏನೂ ಇಲ್ಲದಿದ್ದರೂ, ಸೇಂದ್ರಕ, ಬಾಣ, ಕೇಕಯರಂಥಾ ಸಣ್ಣ ಮನೆತನಗಳ ಇತಿಹಾಸ ತಿಳಿಯುವಲ್ಲಿ ಹಲ್ಮಿಡಿ ‌ಶಾಸನವು ಸಹಕಾರಿಯಾಗಿದೆ. 
  • ಸಾಮಾಜಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಹಲ್ಮಿಡಿ ಶಾಸನದಲ್ಲಿ ಉಲ್ಲೇಖವಾಗಿರುವ ಬಟಾರಿ ಕುಲ, ಬಾಳ್ಗಚ್ಚು, ಅಕರ, ಒಡ್ಡು ಮುಂತಾದವು ಕರ್ನಾಟಕ ಸಾಂಸ್ಕೃತಿಕ ಇತಿಹಾಸದ ಗಮನಾರ್ಹ ಸಂಗತಿಗಳನ್ನು ಹೇಳುತ್ತದೆ. 
  • ಶಾಸನದ ಮೇಲ್ಭಾಗದಲ್ಲಿ ವಿಷ್ಣುವಿನ ಸುದರ್ಶನ ಚಕ್ರದ ಕೆತ್ತನೆ, ವಿಷ್ಣು ಸ್ತ್ರೋತ್ರವಾದ ಶ್ಲೋಕವೂ ಇರುವುದರಿಂದ, ಇದು ಕ್ರಿ.ಶ ಐದನೇ ಶತಮಾನದ ಕಾಲದಲ್ಲಿ ವೈಷ್ಣವ ಧರ್ಮಪ್ರಸಾರ ಹೇಗಿತ್ತು ಎಂಬ ಬಗ್ಗೆ ಸ್ಥೂಲಚಿತ್ರಣ ಕೊಡುತ್ತದೆ
  •  ಬೇರೆ ಶಾಸನಗಳಂತೆ ಆರಂಭದಲ್ಲಿ‌ 'ಸ್ವಸ್ತಿ' ಶಬ್ದವನ್ನು ಬಳಸದೇ ಪ್ರಾರ್ಥನಾ ಶ್ಲೋಕವೊಂದರಿಂದ ಶಾಸನವನ್ನು ಪ್ರಾರಂಭಿಸಿರುವುದು ಒಂದು ವಿಶೇಷ.
  • ಕ್ರಿ.ಶ ಐದನೇ ಮತ್ತು ಆರನೇ ಶತಮಾನಗಳಷ್ಟು ಹಿಂದೆ ಕನ್ನಡ ಭಾಷೆಯ ರಚನೆ ಸ್ವರೂಪಗಳು ಯಾವ ರೀತಿಯಲ್ಲಿದ್ದವು ಎಂಬುದನ್ನು ತಿಳಿಯುವ ಸಾಧನ ಸಾಮಾಗ್ರಿ ನಮಗೆ ಹಲ್ಮಿಡಿ ಶಾಸನದಲ್ಲಿ ದೊರೆಯುತ್ತದೆ.
  • ಕನ್ನಡ ಭಾಷೆಯ ಆರಂಭದ ಶಾಸನಗಳು ಪದ್ಯರೂಪದಲ್ಲಿವೆ. ಆದರೆ ಹಲ್ಮಿಡಿ ಶಾಸನ ಗದ್ಯರೂಪದಲ್ಲಿದೆ‌. ಹಾಗಾಗಿ ಕನ್ನಡ ಭಾಷೆಯ ಗದ್ಯದ ಉಗಮವನ್ನು ವಿಚಾರ ಮಾಡುವಾಗ ಹಲ್ಮಿಡಿ ಶಾಸನವನ್ನು ಗಮನಿಸಲೇಬೇಕಾಗುತ್ತದೆ‌ 
ಉಪಸಂಹಾರ

ಹಲ್ಮಿಡಿ ಶಾಸನವು ಕನ್ನಡದ ಮೊದಲ ಉಪಲಬ್ಧ ಶಾಸನ. ಇದರ ರಚನೆಯ ಕಾಲ ಸುಮಾರು ಕ್ರಿ.ಶ. 450. ಬೇಲೂರು ಗ್ರಾಮದ ಹಲ್ಮಿಡಿ ಗ್ರಾಮದಲ್ಲಿ ಈ ಶಾಸನ ದೊರೆತಿದ್ದು, ಇದೊಂದು ದಾನಶಾಸನವಾಗಿದೆ‌. ಜೊತೆಗೆ ಇದೊಂದು ‌ವೀರಗಲ್ಲು ಕೂಡ. ಸಾಂಸ್ಕೃತಿಕ, ಭಾಷಿಕ, ಐತಿಹಾಸಿಕ ಕಾರಣಗಳಿಂದ ಈ ಶಾಸನಕ್ಕೆ ಕನ್ನಡ ಶಾಸನ ಸಾಹಿತ್ಯದಲ್ಲಿ ಮಹತ್ವದ ಸ್ಥಾನವಿದೆ. 

ಆದರೆ ಶಾಸನದಲ್ಲಿ ಉಕ್ತವಾಗಿರುವ ವ್ಯಕ್ತಿಗಳ ಹೆಸರುಗಳು ಮತ್ತು ವ್ಯಕ್ತವಾಗಿರುವ ವಸ್ತು, ವಿಷಯದೊಡನೆ ವಿದ್ವಾಂಸರ ನಡುವೆ ಇನ್ನೂ ಭಿನ್ನಾಭಿಪ್ರಾಯವಿದೆ. ಇನ್ನೂ ಎಲ್ಲರಿಗೂ ಏಕರೂಪ ತೀರ್ಮಾನಕ್ಕೆ ಬರಲಾಗಿಲ್ಲ.

ಆದರೂ ಈ ಶಾಸನದಲ್ಲಿ ರಾಜನೊಬ್ಬ ವೀರನಿಗೆ ಗೌರವ ಸಮರ್ಪಣೆ ಮಾಡಿರುವುದನ್ನು ಎಲ್ಲರೂ ಒಪ್ಪಿದ್ದಾರೆ. ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ವಿಜ ಅರಸ ಎಂಬ ವ್ಯಕ್ತಿಯೇ ಇಲ್ಲಿ ಗೌರವಕ್ಕೆ ಪಾತ್ರನಾಗಿರುವವನು. ಅದಕ್ಕಾಗಿ ಅವನಿಗೆ ಹಲ್ಮಿಡಿ ಮತ್ತು ಮೂನುವಳ್ಳಿ ಗ್ರಾಮಗಳನ್ನು ದಾನವಾಗಿ ನೀಡಲಾಗಿದೆ ಎಂದು ಶಾಸನದಲ್ಲಿ ಉಕ್ತವಾಗಿದೆ. ಅಲ್ಲದೇ ಯುದ್ಧದಲ್ಲಿ ಹೋರಾಡಿದ ರಕ್ತಸಿಕ್ತ ಖಡ್ಗವನ್ನು ತೊಳೆಯುವ ವಿಶಿಷ್ಟ ಸಂಪ್ರದಾಯದ "ಬಾಳ್ಗಚ್ಚು" ಪದ್ಧತಿಯನ್ನು ನಾವಿಲ್ಲಿ ಕಾಣಬಹುದಾಗಿದೆ. 

(ವಿವಿಧ ಮೂಲಗಳಿಂದ)
********
ಕೆ.ಎ.ಸೌಮ್ಯ, ಮೈಸೂರು


***********
ಕನ್ನಡ ಭಾಷೆ ಸಾಹಿತ್ಯದ ಹಿನ್ನೆಲೆಯಲ್ಲಿ ಹಲ್ಮಿಡಿ ಶಾಸನ / ಹಲ್ಮಿಡಿ ಶಾಸನದ ಐತಿಹಾಸಿಕ, ಭಾಷಿಕ ಮತ್ತು ಸಾಂಸ್ಕೃತಿಕ ಮಹತ್ವದ ಬಗ್ಗೆ ಬರೆಯಿರಿ
************
(ಎಂ.ಎ.ಕನ್ನಡ 2008, 2007, 2013)


ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)