ಶಾಸನ ಪದದ ಅರ್ಥ ಮತ್ತು ವ್ಯಾಪ್ತಿ

ಪೀಠಿಕೆ

ಶಾಸನ ಎಂಬುದು 'ಶಾಸ್' ಎಂಬ ಸಂಸ್ಕೃತ ಧಾತುವಿನಿಂದ ನಿಷ್ಪನ್ನವಾದ ಪದ. ಇದರರ್ಥ ಆಜ್ಞೆ. 

ಶಾಸನ >>> ಶಾಸ್ (ಸಂಸ್ಕೃತ) >>> ಆಜ್ಞೆ

ರಾಜಾಜ್ಞೆಗಳನ್ನು ಶಾಸನ ಎಂದು ಕರೆಯಲಾಗುತ್ತದೆ. ಮೂಲದಲ್ಲಿ ರಾಜಾಜ್ಞೆಗಳನ್ನು ಮಾತ್ರವೇ "ಶಾಸನ" ಎಂದು ಕರೆಯುತ್ತಿದ್ದರು. ನಂತರ ಈ ಪದದ ವ್ಯಾಪ್ತಿ ಹಿರಿದಾಯಿತು. ರಾಜನಲ್ಲದ ಇತರರು ಹಾಕಿಸಿದ ಬರಹಗಳನ್ನು ಕೂಡ ಶಾಸನಗಳೆಂದು ಕರೆಯುವ ರೂಢಿ ಬಂದಿತು. ಯಾವುದೇ ಒಂದು ವಿಷಯವಾಗಲೀ ಕಲ್ಲು ಅಥವಾ ಮರ ಅಥವಾ ಲೋಹಗಳ ಮೇಲೆ ಕೆತ್ತಿಸಿದ ಬರಹಗಳು "ಶಾಸನ" ದ ವ್ಯಾಪ್ತಿಗೆ ಸೇರತೊಡಗಿದವು. ಇಂಗ್ಲೀಷಿನಲ್ಲಿ ಇದಕ್ಕೆ Inscription, Epigraph ಎನ್ನುತ್ತಾರೆ.

ಶಾಸನ ಪದದ ಅರ್ಥ ಮತ್ತು ವ್ಯಾಪ್ತಿ

ಶಾಸನ ಎಂಬುದು ಸಂಸ್ಕೃತ ಪದ. ಇದನ್ನು ಕಾನೂನು ಎಂಬರ್ಥದಲ್ಲಿ ಇಂದಿಗೂ ನಾವು ಬಳಸುತ್ತಿದ್ದೇವೆ. 'ಶಾಸಕ' ಎಂಬ ಪದವೂ ಇದರೊಂದಿಗೆ ಸಂಬಂಧ ಇರಿಸಿಕೊಂಡಿದೆ. 'ಶಾಸಕ' ಎಂದರೆ ಕಾನೂನು ರೂಪಿಸುವವನು, ಕಾನೂನು ಅನುಸಾರ ಅಧಿಕಾರ ನಡೆಸುವವರು ಎಂಬರ್ಥ ಬರುತ್ತದೆ. 

ಶಾಸನ ಎಂಬ ಪದದ ಅರ್ಥ ಶಾಸ್ ಎಂಬ ಧಾತುವಿನಿಂದ ಬಂದಿದ್ದು. 'ಶಾಸ್' ಎಂಬ ಪದದಿಂದ ನಿಷ್ಪನ್ನವಾದ 'ಶಾಸನ' ಪದಕ್ಕೆ ಆಜ್ಞಾಪಿಸು, ಶಿಕ್ಷಿಸು, ನಿಯಂತ್ರಿಸು ಎಂಬ ಅರ್ಥಗಳಿವೆ. 

"ಶಾಸನ ಎಂಬ ಪದ ರಾಜಾಜ್ಞೆಗಳನ್ನು ತಿಳಿಸುವ ಬರಹಗಳನ್ನು ಹೇಳುತ್ತದೆ" ಎನ್ನುತ್ತಾನೆ ಕೌಟಿಲ್ಯ.

ಶುಕ್ರನೀತಿಸಾರದಲ್ಲಿ ಶಾಸನದಲ್ಲಿನ ವಿಷಯ ನಿರೂಪಣೆ ಹೇಗಿರಬೇಕೆಂದು ತಿಳಿಸುತ್ತದೆ. 

  • ಶಾಸನ ಪತ್ರದಲ್ಲಿ ರಾಜನ ಸ್ವಂತ ರುಜು ಮತ್ತು ಆಜ್ಞೆ ಹೊರಟ ದಿನಾಂಕ ಇರಬೇಕು. 
  • ಶಾಸನ ಪತ್ರವು 'ನೀವೆಲ್ಲಾ ಕೇಳಿರಿ, ನೀವೆಲ್ಲಾ ಹೀಗೆ ಮಾಡಬೇಕು' ಎಂದು ಆರಂಭವಾಗಬೇಕು.
  • ರಾಜಮುದ್ರಾ ಸಹಿತವಾದ ಶಾಸನಕ್ಕೆ ಮಾತ್ರವೇ ಮಾನ್ಯತೆ. 
"ತಾಳೆಪತ್ರದ ಮೇಲೆ ಲಿಖಿತವಾದ ಬರಹವು ಶಾಸನವೇ ಆದರೂ, ಆ ವಿಷಯಯವು ಬಹುಕಾಲ ಉಳಿಯಲೆಂದು ತಾಮ್ರಪಟಗಳ ಮೇಲೂ, ಶಿಲೆಗಳ ಮೇಲೂ ಕೊರೆದರು. ಇವೂ ರಾಜಾಜ್ಞೆಗಳೇ ಆದುದರಿಂದ ಇವುಗಳನ್ನೂ ಶಾಸನ ಎಂದು ಕರೆದರು" ಎನ್ನುತ್ತಾರೆ ನಮ್ಮ ವಿದ್ವಾಂಸರು. 

ಶುಕ್ರನೀತಿಸಾರದಲ್ಲಿ ಹೀಗಿದೆ

'ರಾಜಶಾಸನಗಳನ್ನು ಪ್ರಜೆಗಳಿಗೆ ಡಂಗುರ ಹೊಡೆದು ತಿಳಿಸಬೇಕು ಮತ್ತು ಅವುಗಳನ್ನು ಪ್ರಜೆಗಳ ಗಮನಕ್ಕೆ ತರಲು ನಾಲ್ಕು ರಸ್ತೆ ಕೂಡುವ ಕಡೆ ಬರೆಯಿಸಿ ಪ್ರಕಟಿಸಬೇಕು' 

ಬ್ರಿಟಾನಿಕಾ ವಿಶ್ವಕೋಶದಲ್ಲಿ ಹೀಗಿದೆ

ಸಾಮಾನ್ಯವಾಗಿ ನಾಶವಾಗುವಂತಹಾ ತಾಳೆಗರಿ, ಕಾಗದ ಮೊದಲಾದವುಗಳ ಮೇಲಿನ ಬರಹಗಳನ್ನು ಹೊರತುಪಡಿಸಿ ಬಹುಕಾಲ ಉಳಿಯುವ ಗಟ್ಟಿ ವಸ್ತುಗಳ (ಶಿಲೆ, ಲೋಹ) ಮೇಲೆ ಬರೆದಿರುವ ಬರವಣಿಗೆಯನ್ನು ಶಾಸನ ಎಂದು ಕರೆಯಲಾಗುತ್ತದೆ. 

ಕಾಲಕ್ರಮೇಣ ಬರವಣಿಗೆಗೆ ಬಳಸುವ ಎಲ್ಲಾ ವಸ್ತುಗಳ ಮೇಲೆ ಶಾಸನಗಳನ್ನು ಬರೆಸುವ ರೂಢಿ ಬಂದಿತು. 

  • ಈಜಿಪ್ಟ್ ನಲ್ಲಿ ಮರದ ಮೇಲೆ ಬರೆದಿರುವ ಶಾಸನಗಳು ಸಿಕ್ಕಿದೆ.     
  • ಚೀನಾ ದಲ್ಲಿ ಮೂಳೆಯ ಮೇಲೆ ಬರೆದಿರುವ ಶಾಸನಗಳು ದೊರೆತಿವೆ.
  •  ಮೆಸಪಟೋಮಿಯಾ ದಲ್ಲಿ ಮಣ್ಣು ಹಸಿ ಇರುವಾಗ ಅದರ ಮೇಲೆ ಮುದ್ರೆಗಳಿಂದ ಒತ್ತಿ ಬಳಿಕ ಸುಡುತ್ತಿದ್ದ ಶಾಸನ ಸಿಕ್ಕಿದೆ.  
  • ಆಂಧ್ರಪ್ರದೇಶ ದಲ್ಲಿ ಸ್ಫಟಿಕದ ಹರಳಿನ ಮೇಲಿರುವ ಶಾಸನದ ಬರಹ ಸಿಕ್ಕಿದೆ. 
  • ಅಜಂತಾದ ಬೌದ್ಧ ಗುಹೆಗಳಲ್ಲಿ ಬಣ್ಣದಲ್ಲಿ ಬರೆದಿರುವ ವರ್ಣಿತ ಶಾಸನಗಳು ಸಿಕ್ಕಿವೆ.
ಶಿಲೆಗಳ ಮೇಲೆ ಶುದ್ಧ ಕಾವ್ಯಗಳನ್ನು ಕೆತ್ತಿರುವ ನಿದರ್ಶನಗಳು ಹಲವಾರಿವೆ. 

ಉದಾಹರಣೆಗೆ : 
  1. ಉದಯಪುರದ ರಾಜಸಮುದ್ರ ಶಾಸನದಲ್ಲಿ ಇರುವ "ರಾಜಪ್ರಶಸ್ತಿ ಕಾವ್ಯ"
  2. ಅಮರೇಶ್ವರ ದೇವಾಲಯದ ಮುಂದಿನ ಕಲ್ಲುಗಳ ಮೇಲಿರುವ ಹಲಾಯುಧ "ಮಹಿಮ್ನ ಸ್ತೋತ್ರ" 
ಕಾಲ ಕಳೆದಂತೆ ರಾಜನ ಹೊರಡಿಸಿದ ಆಜ್ಞೆ ಅಲ್ಲದೇ ಉಳಿದವೂ ಕೂಡ ಶಾಸನದ ವ್ಯಾಪ್ತಿಗೆ ಸೇರತೊಡಗಿದವು. ರಾಜನೊಬ್ಬ ನೀಡಿದ ದಾನವೂ ಅದಕ್ಕೆ ಅನ್ವಯವಾಯ್ತು. ಕೊಟ್ಟ ದಾನ ಅಧಿಕೃತವಾದದ್ದು ಎಂಬ ಕಾರಣಕ್ಕೆ ದಾನ ಹೊಂದಿದ ವಿವರ ಶಾಸನವಾಯ್ತು. ಇದೇ ಮುಂದುವರೆದು, ರಾಜರ ಪ್ರಶಸ್ತಿ ಕುರಿತು ಹೇಳುವ ಬರಹಗಳು, ವೀರರ ಸಾವನ್ನು ಕುರಿತು ಹೇಳುವ ಬರಹಗಳು, ಸನ್ಯಾಸಿಯ ಮರಣವನ್ನು ಹೇಳುವ ಬರಹಗಳು, ಕಡೆಗೆ ಗಟ್ಟಿ ವಸ್ತುಗಳಾದ ಕಲ್ಲು, ಮರ, ಮಣ್ಣಿನ ವಸ್ತು ಮೊದಲಾದವುಗಳ ಮೇಲೆ ಬರೆಯಲ್ಪಟ್ಟ ಯಾವುದೋ ವಿಷಯವನ್ನು 'ಶಾಸನ' ಎಂದೇ ಕರೆಯುವ ರೂಢಿಯಾಯ್ತು. 

ಮೊದಲ ಹಂತದ ಶಾಸನ

ರಾಜ ಕೊಟ್ಟ ದಾನ ಅಥವಾ ಆತ ಹೊರಡಿಸಿದ ರಾಜಾಜ್ಞೆ ಕುರಿತು ಹೇಳುತ್ತಿದ್ದವು.

ಎರಡನೇ ಹಂತದ ಶಾಸನ

ರಾಜರಲ್ಲದೇ ಬೇರೆಯವರು ಕೊಟ್ಟ ದಾನಗಳನ್ನು ಕುರಿತು ಹೇಳುತ್ತಿದ್ದವು. 

ಮೂರನೇ ಹಂತದ ಶಾಸನ

ದಾನಕ್ಕೆ ಸಂಬಂಧಿಸಿದ ರಾಜಾಜ್ಞೆಗಳನ್ನು ಒಳಗೊಂಡಿರದ ಎಲ್ಲಾ ವಿಷಯಗಳ ಬರವಣಿಗೆಗಳು.

ಶಾಸನಕ್ಕೆ ಇಂಗ್ಲೀಷಿನಲ್ಲಿ "Inscription" ಎಂಬ ಪದವಿದೆ. "Epigraph" ಎಂಬ ಸಮಾನಾರ್ಥಕ ಪದವೂ ಇದೆ. 

Inscrible >> ಕೆತ್ತುವುದು

ಸೋಮದೇವನ ಕೃತಿ 'ಲಲಿತ ವಿಗ್ರಹ ರಾಜನಾಟಕ', ಮದನ ವಿರಚಿತ 'ಪಾರಿಜಾತ ಮಂಜರಿ', ಪರಮಾರ ಭೋಜನ 'ಕೂರ್ಮಶತಕ' 'ಕೂರ್ಮಾಷ್ಟಕ' 'ಕೋದಂಡ ಕಾವ್ಯ' ಮುಂತಾದವು ಕೇವಲ ಶಾಸನಗಳಲ್ಲಿ ಕೆತ್ತಲ್ಪಟ್ಟಿದೆ. ಈ ಕೃತಿಗಳಿಗೆ ಹಸ್ತಪ್ರತಿಗಳೇ ಇಲ್ವಂತೆ. ಇವು ಶಿಲಾಂತದಲ್ಲೇ ಉಳಿದು ಬೆಳಕಿಗೆ ಬಂದಿವೆ. 

ಬಂಡೆಗಳ ಮೇಲಿನ ಶಾಸನ

ಕಾವ್ಯ ನಾಟಕಗಳನ್ನು ಅಲ್ಲದೇ ಇತರ ಬಗೆಯ ಕೃತಿಗಳನ್ನೂ ಶಾಸನಗಳನ್ನು ಕೆತ್ತಿದ್ದಾರೆ. ರಾಜಾಸ್ಥಾನದಲ್ಲಿ ಒಂದು ಬಂಡೆಯ ಮೇಲೆ "'ಉನ್ನತಿ ಶಿಖರ ಪುರಾಣ" ಎಂಬ ದಿಗಂಬರ ಜೈನ ಕೃತಿಯನ್ನು ಕೆತ್ತಲಾಗಿದೆ. 

ದೇವಗಢದ ಶಿಲಾಫಲಕದ ಮೇಲೆ 18 ಭಾಷೆಗಳ ಲಿಪಿ ಕೆತ್ತಲಾಗಿದೆ. 

ಅತ್ಯಂತ ಸ್ವಾರಸ್ಯಪೂರ್ಣವಾದ ಶಾಸನವೆಂದರೆ ಮದರಾಸಿನ ಪುದುಕೋಟೆಗೆ ಹತ್ತಿರವಿರುವ ಬೆಟ್ಟದ ಬಂಡೆಯ ಮೇಲೆ ಕೊರೆಯಲಾಗಿರುವ ಶಾಸನದಲ್ಲಿ ಕ್ರಿ.ಶ.7ನೇ ಶತಮಾನದ ಸಂಗೀತ ಪದ್ಧತಿಯ ಮೇಲೆ ಬರೆಯಲಾಗಿದೆ. 

ನಿಜವಾದ ಮೂಲಾರ್ಥದಲ್ಲಿ ರಾಜಶಾಸನಗಳೇ ನಿಜವಾದ ಅರ್ಥದಲ್ಲಿ "ಶಾಸನಗಳು". 

ಈ ನಿಯಮವನ್ನು ಸಡಿಲಿಸಿದರೆ ರಾಜಶಾಸನಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು.

  • ದಾನಶಾಸನ.
- "ದಾನಶಾಸನ"ಗಳನ್ನು ಹೇಗೆ ಬರೆಯಿಸಬೇಕು, ಅದರಲ್ಲಿ ಯಾವ ವಿಷಯಗಳಿರಬೇಕು ಎಂಬುದರ ಸ್ಪಷ್ಟ ನಿರ್ದೇಶನವನ್ನು ಸ್ಮೃತಿ, ಧರ್ಮಶಾಸ್ತ್ರಗಳಲ್ಲಿ ಮಾಡಲಾಗಿದೆ.

  • ಪ್ರಸಾದ ಶಾಸನ.
  • ಜಯಪತ್ರ.

ಶಾಸನಗಳ ನಕಲು

ಶಾಸನಗಳನ್ನು ನಕಲು‌ ಮಾಡುವ ಸಂಪ್ರದಾಯವೂ ಇತ್ತು. ಕ್ರಿ.ಶ.2ನೇ ಶತಮಾನದ ಕೆಲವು ಗುಹಾಶಾಸನಗಳು ಮೂಲತಃ ವಸ್ತ್ರ ಅಥವಾ ತಾಮ್ರಪಟದ ಮೇಲಿದ್ದ ರಾಜಶಾಸನಗಳ ನಕಲುಗಳಾಗಿರಬೇಕೆಂದು ಊಹಿಸಲಾಗಿದೆ. 

ಉದಾಹರಣೆ

ಗೌತಮೀಪುತ್ರ ಶಾತಕರ್ಣಿಯ ನಾಸಿಕ್ ಗುಹಾಶಾಸನ, ಶಾತವಾಹನ ದೊರೆಗಳ ಕಾಲದ ಈ ಗುಹಾ ಶಾಸನಗಳು ಒಕ್ಕಣೆಯಲ್ಲಿ ತಾಮ್ರಪಟಗಳನ್ನು ಹೋಲುತ್ತವೆ. 

ತಾಮ್ರಪಟಗಳು ಕಳೆದು ಹೋಗುವುದರಿಂದ ಈ ರೀತಿ ನಕಲು ಮಾಡುವ ಪದ್ಧತಿ ರೂಢಿಗೆ ಬಂದಿರಬೇಕು. ಶಾಸನಗಳನ್ನು ನಕಲು ಮಾಡಲು ದೇವಾಲಯದ ಗೋಡೆಯ ಮೇಲೆ, ಶಿಲೆಗಳು, ಬಂಡೆಗಳನ್ನು ಬಳಸಲಾಗುತ್ತಿತ್ತು. ಇದಲ್ಲದೇ ತಾಮ್ರಪಟಗಳ ಮೇಲೆ ಕೆತ್ತಿಸಿವುದು ಖಾಸಗೀ ಉಪಯೋಗಕ್ಕಾದರೆ, ಇದರ ವಿಚಾರ ಸಾರ್ವಜನಿಕರಿಗೂ ತಿಳಿಯಬೇಕಾದರೆ ಅದರ ನಕಲನ್ನು ಶಿಲಾಶಾಸನಗಳ ರೂಪದಲ್ಲಿ ಕೆತ್ತಿಸುವುದು ಅನಿವಾರ್ಯವಾಗುತ್ತಿತ್ತು. 

(ವಿವಿಧ ಮೂಲಗಳಿಂದ) 

************

ಕೆ.ಎ.ಸೌಮ್ಯ, ಮೈಸೂರು

(ಎಂ.ಎ.ಕನ್ನಡ)





 







ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)