ಕರ್ನಾಟಕದಲ್ಲಿ ಶಾಸನ ಅಧ್ಯಯನದ ಇತಿಹಾಸ ಮತ್ತು ಸ್ವರೂಪ

ಪೀಠಿಕೆ

ಶಾಸನ ಅಧ್ಯಯನವು ಪಾಶ್ಚಾತ್ಯರಲ್ಲಿಯೇ ತಡವಾಗಿ ಆರಂಭವಾಯಿತು. ಏಕೆಂದರೆ ಶಾಸನ ಶಾಸ್ತ್ರದ ಅಧ್ಯಯನವೇ ಹೊಸ ಕ್ಷೇತ್ರ. ಹಾಗಾಗಿ ಭಾರತದಲ್ಲಿ 18ನೇ ಶತಮಾನದ ಅಂತ್ಯದಲ್ಲಿ ಅಧ್ಯಯನ ಆರಂಭವಾಯಿತು. ಕನ್ನಡ ಶಾಸನ ಪ್ರಕಟಣೆಯ ಪ್ರಥಮ ಉಲ್ಲೇಖವನ್ನು 18ನೇ ಶತಮಾನದ ಕಡೆಯಲ್ಲಿ ಕಾಣುತ್ತೇವೆ. ಈವರೆಗೂ ಕನ್ನಡದಲ್ಲಿ ಸುಮಾರು 25,000 ಕ್ಕೂ ಹೆಚ್ಚು ಶಾಸನಗಳು ದೊರೆತಿವೆ.

ಕನ್ನಡದಲ್ಲಿ ಶಾಸನ ಅಧ್ಯಯನ

ಕನ್ನಡ ಶಾಸನಗಳ ಅಧ್ಯಯನ ಆರಂಭವಾಗಿದ್ದು 18ನೇ ಶತಮಾನದಲ್ಲಿ. ಬಂಗಾಳದ Royal Asiatic Society ಪ್ರಕಟಿಸುತ್ತಿದ್ದ Asiatic Researches ಎಂಬ ಸಂಶೋಧನಾ ಬರಹಗಳ ಪತ್ರಿಕೆಯಲ್ಲಿ 1791ರಲ್ಲಿ ಕನ್ನಡ ಶಾಸನಗಳ ಕುರಿತ ಲೇಖನವೊಂದು ಪ್ರಕಟವಾಯಿತು. 

ಸರ್ ವಿಲಿಯಮ್ ಜೋನ್ಸ್ ಇದರ ಕರ್ತೃ. 

ಈ ಲೇಖನವು ತಾಮ್ರಪಟದ ಮೇಲೆ ಕೆತ್ತಿದ್ದ ವಿವರಕ್ಕೆ ಸಂಬಂಧಿಸಿತ್ತು. ಕಂಚಿಯಲ್ಲಿ ದೊರೆತಿದ್ದ ಈ ತಾಮ್ರಪಟವು ವಿಜಯನಗರ ದೊರೆಗಳು ಕಂಚಿಯ ದೇವಸ್ಥಾನಕ್ಕೆ ಕೊಟ್ಟಿದ್ದ ದತ್ತಿಯನ್ನು ಕುರಿತು ಈ ಶಾಸನ ಹೇಳುತ್ತದೆ. 

ಈ ಲೇಖನವೇ "ಕನ್ನಡ ಶಾಸನಗಳನ್ನು ಕುರಿತ ಮೊಟ್ಟಮೊದಲ ಪ್ರಕಟಣೆ" 

ಕರ್ನಲ್ ಮೆಕೆಂಜಿ ಎಂಬ ಸೈನ್ಯಾಧಿಕಾರಿ ಶಾಸನಗಳ ಸಂಗ್ರಹ ಮತ್ತು ಪ್ರಕಟಣೆಗೆ ತನ್ನದೇ ಆದ ಸೇವೆ ಸಲ್ಲಿಸಿದ್ದಾನೆ. ಮೈಸೂರು ಸಂಸ್ಥಾನದಲ್ಲಿ ಈತನನ್ನು ಭೂಪರಿವೀಕ್ಷಣೆಗೆ ಸರ್ವೆ ಅಧಿಕಾರಿಯಾಗಿ ನೇಮಿಸಿದ ಸಂದರ್ಭದಲ್ಲಿ ಈತ ಊರೂರಿನಲ್ಲಿ ದೊರೆಯುತ್ತಿದ್ದ ತಾಡೆಯೋಲೆ ಪತ್ರಗಳು, ಕೈಫಿಯತ್ತುಗಳು, ತಾಮ್ರಪಟಗಳು, ನಾಣ್ಯ ಮೊದಲಾದ ಪ್ರಾಚೀನ ವಸ್ತು ವಿಶೇಷಗಳನ್ನು ಸಂಗ್ರಹಿಸಿದ. ಹೀಗೆ ಅವನು ಸಂಗ್ರಹಿಸಿದ ವಸ್ತುಗಳಲ್ಲಿ ಶಾಸನ ಪಡಿಯಚ್ಚುಗಳೂ ಇದ್ದವು. ಅದನ್ನು ಓದುವ ಅರ್ಥೈಸುವ ಪ್ರಯತ್ನವನ್ನು ಈತ ಮಾಡಿದ. ಈ ಕಾರ್ಯದಲ್ಲಿ ಅವನಿಗೆ ವೆಂಕಟಬೋರಯ್ಯ ಎಂಬುವವನು ಸಹಾಯ ಮಾಡಿರುವುದಾಗಿ ತಿಳಿದು ಬರುತ್ತದೆ. ಮೆಕಂಜಿ ಸಂಗ್ರಹಿಸಿರುವ ಒಟ್ಟಾರೆ ಶಾಸನಗಳ ಸಂಖ್ಯೆ 8026. ಮೆಕಂಜಿ ತಾನು ಸಂಗ್ರಹಿಸಿರುವ ಶಾಸನಗಳ ಬಗ್ಗೆ Asiatic Researches ಪತ್ರಿಕೆಯಲ್ಲಿ ವರದಿ ಮಾಡಿದ್ದಾನೆ. 

ವಿಲಿಯಂ ಹೆನ್ರಿ ವಥನ್ ಎಂಬಾತ 12 ಶಾಸನಗಳನ್ನು ಓದಿ ಭಾಷಾಂತರಿಸಿ ಅವುಗಳ ಸಾರಾಂಶವನ್ನು ಕ್ರಿ.ಶ 1835 ರಲ್ಲಿ ಪ್ರಕಟಿಸಿದ. 

ಕನ್ನಡ ಶಾಸನಗಳ ಅಧ್ಯಯನ ಒಂದು ರೂಪು ಪಡೆದುಕೊಂಡಿದ್ದು ವಾಲ್ಟರ್ ಎಲಿಯಟ್ ಎಂಬ ಆಂಗ್ಲ ವಿದ್ವಾಂಸನಿಂದ. ಈತ ಕ್ರಿ.ಶ 1836ರಲ್ಲಿ Hindu Inscriptions ಎಂಬ ಲೇಖನವನ್ನು ಪ್ರಕಟಿಸಿದ. ಈ ಲೇಖನದಿಂದ ಕರ್ನಾಟಕದ ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸ ಅಧ್ಯಯನದಲ್ಲಿ ಒಂದು ಹೊಸಾ ಅಧ್ಯಾಯ ಆರಂಭವಾಗುತ್ತದೆ. ನಂತರ ಈತ Karnataka Desh Inscriptions ಎಂಬ ಪುಸ್ತಕ ಪ್ರಕಟಿಸಿದ್ದು, ಅದರಲ್ಲಿ 565 ಶಾಸನಗಳಿವೆ. 

"ಅಶೋಕನ‌ ಶಾಸನಗಳನ್ನು ಯಶಸ್ವಿಯಾಗಿ ಓದಲು ಸಾಧ್ಯವಾದದ್ದು ಶಾಸನ ಅಧ್ಯಯನದಲ್ಲಿ ಮುಖ್ಯವಾದ ಸಾಧನೆ" 

1837ರಲ್ಲಿ ಜೇಮ್ಸ್ ಪ್ರಿನ್ಸೆಪ್ ಎಂಬಾತ Asiatic Society ಯಲ್ಲಿ 10ನೇ ಶತಮಾನದ ಕನ್ನಡ ಶಾಸನದ ನಕಲು ಮತ್ತು ಸಾರಾಂಶವನ್ನು ಪ್ರಕಟಿಸಿದ. ಇದರಿಂದ ಕರ್ನಾಟಕದಲ್ಲಿ ದೊರೆತ ಅಶೋಕನ‌ ಶಾಸನಗಳನ್ನು ಹಾಗೂ ಬ್ರಾಹ್ಮೀ ಲಿಪಿಯ ಇತರ ಶಾಸನಗಳನ್ನು ಓದಲು ನೆರವಾಯ್ತು. 

ಕನ್ನಡ ಲಿಪಿಯ ವಿಕಾಸವನ್ನು ಗುರುತಿಸುವಲ್ಲಿಯೂ ಈ ಪ್ರಯತ್ನ ಸಹಾಯಕವಾಗಿದೆ. 

ಕನ್ನಡ ಶಾಸನಗಳ ಅಧ್ಯಯನಕ್ಕೆ ಗುರುತರವಾದ ಕಾಣಿಕೆ ಸಲ್ಲಿಸಿದವರು ಜೆ.ಎಫ್.ಫ್ಲೀಟ್ ಮತ್ತು ಬಿ.ಎಲ್.ರೈಸ್. ಒಂದೊಂದು ಶಾಸನವನ್ನೂ ತಾಳ್ಮೆಯಿಂದ ಅಧ್ಯಯನ ಮಾಡಿ, ಅವುಗಳನ್ನು ಅಗತ್ಯ ವಿವರ ಟಿಪ್ಪಣಿಗಳೊಂದಿಗೆ ಪ್ರಕಟಿಸಿದ್ದಾರೆ. ಬಿ.ಎಲ್.ರೈಸ್ ಅವರನ್ನು ಕರ್ನಾಟಕ ಶಾಸನ ಪಿತಾಮಹ ಎಂದು ಗುರುತಿಸಲಾಗುತ್ತದೆ. 

ಬಿ.ಎಲ್.ರೈಸ್ --> ಕರ್ನಾಟಕ ಶಾಸನ ಪಿತಾಮಹ 

ಬಿ.ಎಲ್.ರೈಸ್ ರವರು ಮೈಸೂರು ಪ್ರಾಂತ್ಯದ ಹಳ್ಳಿ ಹಳ್ಳಿಗಳನ್ನು ಸುತ್ತಿ, ಶಾಸನಗಳ ಪರಿವೀಕ್ಷಣೆ ನಡೆಸಿ, ಅವುಗಳ ಪಡಿಯಚ್ಚು ತೆಗೆದುಕೊಂಡು, ಅವುಗಳ ಬರಹಗಳನ್ನು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಪ್ರಕಟಿಸಿದ್ದಾರೆ. ಕ್ರಿ.ಶ 1884 ರಲ್ಲಿ ರೈಸ್ ಅವರನ್ನು ಮೈಸೂರು ಸಂಸ್ಥಾನದ ಪ್ರಾಚ್ಯವಸ್ತು ಇಲಾಖೆಯ ನಿರ್ದೇಶಕರನ್ನಾಗಿ ನೇಮಿಸಲಾಯಿತು. ರೈಸ್ ಅವರು ಸಂಪಾದಿಸಿರುವ Epigraphia Karnatica ಮಾಲಿಕೆಯಲ್ಲಿ ಒಟ್ಟು 8869 ಶಾಸನಗಳಿವೆ. 

ಬಿ.ಎಲ್.ರೈಸ್ ಅವರು ಬೆಳಕಿಗೆ ತಂದ ಶಾಸನಗಳು

  • ಮಳವಳ್ಳಿಯ ಪ್ರಾಕೃತ ಶಾಸನ
  • ತಾಳಗುಂದದ ಕಾಕುಸ್ಥವರ್ಮ ಶಾಸನ 
  • ಗಂಗರ ತಾಮ್ರಪಟಗಳು
  • ಶ್ರವಣಬೆಳಗೊಳದ ನಿಷಧಿ ಬರಹಗಳು
  • ಸಿದ್ಧಾಪುರ, ಜಟಿಂಗ, ಬ್ರಹ್ಮಗಿರಿಗಳಲ್ಲಿ ಅಶೋಕನ‌ ಶಾಸನಗಳ ಶೋಧನೆ
ಪಾಶ್ಚಾತ್ಯರಲ್ಲದೇ ಭಾರತೀಯರು ಸಹ ಕನ್ನಡ ಶಾಸನ ಅಧ್ಯಯನ ಕ್ಷೇತ್ರದಲ್ಲಿ ಮಹತ್ತರವಾದ ಸೇವೆ ಸಲ್ಲಿಸಿದ್ದಾರೆ. ಪಾಶ್ಚಾತ್ಯರು ಶಾಸನ ಸಂಗ್ರಹ ಮಾಡುತ್ತಿದ್ದಾಗ, ದೇಶೀಯ ವಿದ್ವಾಂಸರು ಅವರಿಗೆ ನೆರವು ನೀಡಿದ್ದಾರೆ.‌ ವೆಂಕಟಬೋರಯ್ಯ ಮತ್ತು ಆತನ ಸಹೋದರರು ಪಾಶ್ಚಾತ್ಯ ವಿದ್ವಾಂಸರಿಗೆ ನೀಡಿದ ನೆರವನ್ನು ಇಲ್ಲಿ ಸ್ಮರಿಸಬಹುದು.

ಆರ್.ನರಸಿಂಹಾಚಾರ್ ರವರು ಬಿ.ಎಲ್.ರೈಸ್ ರವರ ಉತ್ತರಾಧಿಕಾರಿಯಾಗಿ ಪ್ರಾಕ್ತನ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ಸುಮಾರು‌ 5000 ಶಾಸನಗಳನ್ನು ನರಸಿಂಹಾಚಾರ್ ಸಂಪಾದಿಸಿ ಪ್ರಕಟಿಸಿದ್ದಾರೆ. ಭಾರತ ಸರ್ಕಾರ ಇವರಿಗೆ "ಮಹಾಮಹೋಪಾಧ್ಯಾಯ" ಎಂಬ ಬಿರುದು ನೀಡಿ ಗೌರವಿಸಿದೆ. 

ಎಂ.ಎಚ್.ಕೃಷ್ಣ ಅವರು ನರಸಿಂಹಾಚಾರ್ ಅವರ ಇಲಾಖೆಯ ಜವಾಬ್ದಾರಿ ವಹಿಸಿದ್ದಾರೆ. ಇವರು ಸಹ ಸುಮಾರು 1000 ದಷ್ಟು ಹೊಸ ಶಾಸನಗಳನ್ನು ಬೆಳಕಿಗೆ ತಂದಿದ್ದಾರೆ. ಹಲ್ಮಿಡಿ ಶಾಸನದ ಪ್ರಕಟಣೆಯ ಕೀರ್ತಿ ಕೃಷ್ಣ ರವರಿಗೆ ಸಲ್ಲಬೇಕು.

ಎಂ.ಎಚ್.ಕೃಷ್ಣ ------> ಹಲ್ಮಿಡಿ ಶಾಸನ

ಪಿ.ಬಿ.ದೇಸಾಯಿಯವರು ಹೈದರಾಬಾದ್ ಕರ್ನಾಟಕದ ಹಲವಾರು ಶಾಸನಗಳನ್ನು ಪ್ರಕಟಿಸಿದ್ದಾರೆ. 

ಎನ್.ವೆಂಕಟರಮಣಯ್ಯ ರವರು ಕರೀಂ ನಗರದ ಜಿನವಲ್ಲಭ ಶಾಸನ ಕಂಡು ಹಿಡಿದಿದ್ದಾರೆ. ಈ ಶಾಸನವು ಜಿನವಲ್ಲಭನು ಪಂಪನ ತಮ್ಮ ಎಂದು ತಿಳಿಸುವುದಲ್ಲದೇ, ಪಂಪನ ಇತರ ವೈಯಕ್ತಿಕ ವಿಷಯಗಳ ಮೇಲೆಯೂ ಬೆಳಕು ಚೆಲ್ಲುತ್ತದೆ. 

ಡಾ.ಎಂ.ಎಂ.ಕಲಬುರ್ಗಿ ಅವರು ಶಾಸನಗಳ ಅಧ್ಯಯನದ ಇತಿಹಾಸ ಕುರಿತು ಮೂರು ಮುಖ್ಯವಾದ ಮಜಲುಗಳನ್ನು ಗುರುತಿಸುತ್ತಾರೆ. ಈ ಮಜಲುಗಳನ್ನು ಅವರು ಯುಗಗಳೆಂದು ಕರೆದಿದ್ದಾರೆ. ಅವು ಯಾವುವೆಂದರೆ; 
  1. ಕರ್ನಲ್ ಮೆಕಂಜಿ ಯುಗ (1791)
  2. ಸರ್ ವಾಲ್ಟರ್ ಎಲಿಯಟ್ ಯುಗ (1837)
  3. ಡಾ.ಫ್ಲೀಟ್‌ & ರೈಸ್ ಯುಗ (1870 ನಂತರ)

ಕನ್ನಡದಲ್ಲಿ ಶಾಸನಗಳನ್ನು ಕುರಿತು ಅನೇಕ ಗ್ರಂಥಗಳನ್ನು ರಚಿಸಲಾಗಿದೆ. ಅವುಗಳಲ್ಲಿ ಮುಖ್ಯವಾದವು ; 

  • ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ- ಚಿದಾನಂದ ಮೂರ್ತಿ 
  • ಸಮಾಧಿ ಬಲಿದಾನ, ವೀರಮರಣಗಳು - ಎಂ.ಎಂ.ಕಲಬುರ್ಗಿ
  • ಆರನೆಯ ವಿಕ್ರಮಾದಿತ್ಯನ ಶಾಸನಗಳು-  ಎಂ.ಜಿ.ನಾಗಯ್ಯ
  • ಕರ್ನಾಟಕದಲ್ಲಿ ಸತೀ ಪದ್ಧತಿ- ಬಿ.ಎಸ್.ಶೇಠೆ
ಉಪಸಂಹಾರ

ಕನ್ನಡ ನಾಡಿನ ಶಾಸನಗಳ ಸಂಗ್ರಹ, ಸಂಪಾದನೆ ಮತ್ತು ಅಧ್ಯಯನದ ಪ್ರಯತ್ನ ರೋಚಕವಾದುದು. ಪಾಶ್ಚಾತ್ಯ ವಿದ್ವಾಂಸರಿಂದ ಈ ಪ್ರಯತ್ನ ಶುರುವಾಯಿತು. ಫ್ಲೀಟ್, ರೈಸ್ ಮೊದಲಾದವರು ಈ ಕ್ಷೇತ್ರದಲ್ಲಿ ಗಣನೀಯವಾದ ಕಾರ್ಯ ಸಲ್ಲಿಸಿದ್ದಾರೆ. ಶಾಸನಗಳು ರಾಜಮನೆತನದ ರಾಜಕೀಯ ಚರಿತ್ರೆ, ಅಂದಿನ ಕಾಲದ ಧಾರ್ಮಿಕ ಜೀವನವನ್ನು ಅರಿಯಲು ಸಹಾಯಕವಾಗಿವೆ.

(ವಿವಿಧ ಮೂಲಗಳಿಂದ)
*************
ಕೆ.ಎ.ಸೌಮ್ಯ
ಮೈಸೂರು

(ಎಂ.ಎ.ಕನ್ನಡ)

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)