ಕನ್ನಡ ಶಾಸನಗಳು- ಮಹತ್ವ

ಚರಿತ್ರೆಯ ರಚನೆಯಲ್ಲಿ ಶಾಸನಗಳ ಮಹತ್ವ

ಶಾಸನಗಳು ಹಲವಾರು ಕಾರಣಗಳಿಂದಾಗಿ ಮಹತ್ವದ ಸ್ಥಾನ ಪಡೆಯುತ್ತವೆ. ಅವುಗಳಲ್ಲಿ ಕೆಲವನ್ನು ಹೀಗೆ ಪಟ್ಟಿ ಮಾಡಬಹುದು. 

  1. ದೀರ್ಘಕಾಲದ ಬಾಳಿಕೆ
  2. ಅಧಿಕೃತವಾದ ದಾಖಲೆ
  3. ವಿಷಯವನ್ನು ಸಾರ್ವಜನಿಕರಿಗೆ ಪ್ರಚುರ ಪಡಿಸುವಲ್ಲಿ ಮಹತ್ವದ ಪಾತ್ರ
ಶಾಸನಗಳು ಪುರಾತತ್ವ ಶೋಧನೆಯ ಮಹತ್ವದ ಅಂಗ.‌ ಬರಹ ರೂಪದ ಇತರ ಆಧಾರಗಳಿಗಿಂತಾ ಶಾಸನದ ಆಧಾರ ಹೆಚ್ಚು ವಿಶ್ವಾಸಾರ್ಹವಾದುದು.‌ ಏಕೆಂದರೆ ಬೇರೆಲ್ಲಾ ಮೂಲಗಳು ನಶಿಸುವ, ತಿದ್ದಲ್ಪಡುವ, ವೈಭವೀಕರಿಸುವ ಅಪಾಯಕ್ಕೆ ತುತ್ತಾಗುತ್ತವೆ. ಆದರೆ ಶಾಸನಗಳಿಗೆ ಈ ಅಪಾಯ ಇಲ್ಲ. 

"ಹಿಂದೂ ಜನಾಂಗದ ಅಧಿಕೃತ ಚರಿತ್ರೆ ಇಲ್ಲದಿರುವಾಗ, ಆಕಸ್ಮಿಕಗಳ ಮೂಲಕ ಆಗಾಗ ಪತ್ತೆಯಾಗುವ ಎಲ್ಲಾ ಅಸಲಿ ಸ್ಮಾರಕಗಳಿಗೆ ನ್ಯಾಯವಾಗಿ ಪ್ರಾಮುಖ್ಯತೆ ಸಲ್ಲುತ್ತದೆ" ಎನ್ನುತ್ತಾನೆ ಕೋಲ್ ಬ್ರೂಕ್ ಎಂಬ ವಿದ್ವಾಂಸ. 

"ಭರತ ಖಂಡದ ಶ್ರೀಮಂತಿಕೆ ಶಾಸನ ರೂಪದ ಅವಶೇಷಗಳಲ್ಲಿ ಭದ್ರವಾಗಿದೆ. ಆ ಶಾಸನಗಳೇ ಈ ದೇಶದ ಪ್ರಾಚ್ಯ ಯುಗ ಸಂಬಂಧವಾದ ಎಲ್ಲಾ ಸಂಶೋಧನಾ ಪಥಗಳಲ್ಲಿ ಐತಿಹಾಸಿಕ ಫಲಿತಾಂಶಗಳಿಗೆ ಖಚಿತವಾದ ಬುನಾದಿಯಾಗಿದೆ" ಎಂದು ಫ್ಲೀಟ್ ಅಭಿಪ್ರಾಯ ಪಡುತ್ತಾರೆ. 

"ಶಾಸನಗಳು ಭಾರತದ ಇತಿಹಾಸದ ಜೀವನಾಡಿ" ಎಂದು ವಿದ್ವಾಂಸರು ಬಣ್ಣಿಸಿದ್ದಾರೆ. ಇಂತಹ ಮಾತುಗಳಲ್ಲಿ ಶಾಸನಗಳ ಮಹತ್ವವು ಚರಿತ್ರೆಯ ರಚನೆಯಲ್ಲಿ ಎಷ್ಟಿದೆ ಅಂತ ಅಂದಾಜಾಗುತ್ತದೆ. 

"ಪ್ರಾಚೀನ ಭಾರತದ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಇತಿಹಾಸದ ಅಭ್ಯಾಸಿಗಳು ತಮ್ಮ ಜ್ಞಾನದ ಕೊರತೆಯನ್ನು ಶಾಸನಗಳ ಅಭ್ಯಾಸದಿಂದ ಹೋಗಲಾಡಿಸಿಕೊಳ್ಳಬಹುದು" ಎನ್ನುತ್ತಾರೆ ದಿಸ್ಕಾಲ್ಕರ್ ಎಂಬ ವಿದ್ವಾಂಸ.

ಶಾಸನಗಳ ಬಹುಮುಖ ಪ್ರಯೋಜನ, ಪ್ರಾಮುಖ್ಯತೆಗಳನ್ನು ಹೀಗೆ ಪಟ್ಟಿ ಮಾಡಬಹುದು

  • ನೇಪಾಳದಲ್ಲಿ ಸಿಕ್ಕಿರುವ ಅಶೋಕನ ಸ್ತಂಭ ಶಾಸನವೊಂದು ಬುದ್ಧನ ಜನ್ಮಸ್ಥಳವನ್ನು ಖಚಿತವಾಗಿ ನಿರ್ಣಯಿಸುತ್ತದೆ. 
  • ಅಶೋಕನ ಮಾಸ್ಕಿ (ಹೈದರಾಬಾದ್) ಶಾಸನದಲ್ಲಿ ಅಶೋಕನಿಗೆ 'ದೇವನಾಂಪ್ರಿಯ' ಎಂಬ ಬಿರುದು ಇರುವುದನ್ನು ಸ್ಪಷ್ಟಪಡಿಸಿದೆ. ಅದರಿಂದಾಗಿ ಈ ಮುಂಚೆ ಸಿಕ್ಕಿರುವ 'ದೇವನಾಂಪ್ರಿಯ' ಹೆಸರಿನ ಶಾಸನಗಳೆಲ್ಲಾ ಅಶೋಕನವು ಅಂತ ತಿಳಿದು ಬರುತ್ತದೆ. 
  • ಗುಪ್ತದೊರೆಗಳ ಶಕವನ್ನು ಕುರಿತ ಬಹುಕಾಲದ ವಿವಾದವನ್ನು ಮಂದಸೋರ್ ಶಾಸನ ಪರಿಹರಿಸುತ್ತದೆ. 
  • ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಿಂದ ಕಾಳಿದಾಸನ ಕುರಿತು ಮಾಹಿತಿ ಸಿಗುತ್ತದೆ. 
  • ಗುಪ್ತವಂಶದಲ್ಲಿ ಬುಧಗುಪ್ತನೆಂಬ ದೊರೆಯ ಅಸ್ತಿತ್ವ 19ನೆಯ ಶತಮಾನದವರೆಗೂ ಗೊತ್ತೇ ಇರಲಿಲ್ಲ. ಬುಧಗುಪ್ತನ ರಾಯಭಾರಿಯನ್ನು ಕುರಿತು ಹೇಳುವ ಶಿಲಾಶಾಸನ ಕ್ರಿ.ಶ. 1838ರಲ್ಲಿ ಸಿಕ್ಕಿತು. ಅದರ ಕಾಲ ಕ್ರಿ.ಶ 484. ಇದರಿಂದ ಬುಧಗುಪ್ತ ಎಂಬ ದೊರೆ ಕ್ರಿ.ಶ 484- 458 ರಲ್ಲಿ ಮಾಳವ ಪ್ರಾಂತ್ಯವನ್ನು ಆಳುತ್ತಿದ್ದ ಎಂಬ ವಿಷಯ ತಿಳಿದುಬಂದಿತು. 
  • ವಿಶಾಖಾದತ್ತನ 'ದೇವಿ ಚಂದ್ರಗುಪ್ತ' ನಾಟಕದ ಕೆಲವು ಭಾಗಗಳಲ್ಲಿ ರಾಮಗುಪ್ತ ಎಂಬುವವನ‌ ಹೆಸರಿದೆ. ಅವನು ಗುಪ್ತವಂಶದವನು ಅಲ್ಲವೆಂದು ಕೆಲವರು ಭಾವಿಸಿದ್ದರು. ಆದರೆ ಕೆಲವು ವರ್ಷಗಳ ಹಿಂದೆ ಮಧ್ಯಪ್ರದೇಶದಲ್ಲಿ ದೊರೆತ ಕ್ರಿ.ಶ 4ನೇ ಶಾಸನದಲ್ಲಿ ರಾಮಗುಪ್ತನನ್ನು 'ಮಹಾರಾಜಾಧಿರಾಜ' ಎಂದು ಕರೆಯಲಾಗಿದೆ. 
  • ಬನವಾಸಿಯಲ್ಲಿ ಕದಂಬರ ಒಂದೂ ಶಾಸನ ಸಿಕ್ಕಿರಲಿಲ್ಲವಾದ್ದರಿಂದ, ನಿಜವಾಗಿಯೂ ಬನವಾಸಿ ಅವರ ರಾಜಧಾನಿ ಹೌದೋ ಅಲ್ಲವೋ ಎಂಬ ಸಂದೇಹ ವಿದ್ವಾಂಸರಿಗಿತ್ತು. ಈಚೆಗೆ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಪ್ರಾಚೀನ ಕದಂಬರ ಶಾಸನ ಸಿಕ್ಕಿರುವುದರಿಂದ ಆ ಸಂದೇಹ ನಿವಾರಣೆಯಾಗಿದೆ.
  • ಐಹೊಳೆ ಶಾಸನದಲ್ಲಿ ಮಂಗಳೇಶನು ರೇವತೀ ದ್ವೀಪವನ್ನು ಗೆದ್ದ ವಿವರವಿದೆ. ಇಲ್ಲಿ ರೇವತೀ ದ್ವೀಪ ಎಂದೇ ನಿಜವಾದ ದ್ವೀಪವಲ್ಲ, ಬದಲಿಗೆ ಕರಾವಳಿಯ ಒಂದು ಪ್ರಾಂತ್ಯ ಎಂದೇ ತಿಳಿದಿದ್ದರು. ಆದರೆ ಕ್ರಿ ಸ್ತ 1009 ರಲ್ಲಿ ಚಾಳುಕ್ಯ ತಾಮ್ರ ಶಾಸನದಲ್ಲಿ ಮಂಗಳೇಶ ಹಡಗುಗಳ ಸೇತುವೆ ಕಟ್ಟಿ, ನೌಕಾಸೇನೆಯ ನೆರವಿನಿಂದ ರೇವತೀ ದ್ವೀಪವನ್ನು ವಶಪಡಿಸಿಕೊಂಡ ಎಂದು ಹೇಳಲಾಗಿದೆ. (ಇದರಿಂದ ಶಾಸನಗಳು ಪರಸ್ಪರ ಪೂರಕ ಎಂಬುದು ತಿಳಿದು ಬರುತ್ತದೆ)
  • ಪಶ್ಚಿಮ ‌ಪಾಕಿಸ್ತಾನದ ಜಿಲ್ಲೆಯೊಂದರಲ್ಲಿ ಕ್ರಿ.ಶ 8ನೇ ಶತಮಾನದ ಶಾಸವೊಂದರಲ್ಲಿ ಹಿಂದೂ ದೊರೆಯೊಬ್ಬ ತುರುಷ್ಕ ಬಲವನ್ನು ಹಿಂದೂ ಪ್ರಾಂತ್ಯದಲ್ಲಿ ಹಿಮ್ಮೆಟ್ಟಿಸಿದನೆಂದು ಉಕ್ತವಾಗಿವೆ. ಇದರಿಂದ ಅಷ್ಟು ಹಿಂದಿನಿಂದಲೇ ಭಾರತದ ಮೇಲೆ ಮುಸ್ಲಿಮರ ದಾಳಿ ಆರಂಭವಾಗಿತ್ತು ಎಂಬ ವಿಶೇಷ ಸಂಗತಿ ತಿಳಿದು ಬರುತ್ತದೆ. 
  • ಸರ್ಕಾರ ರೋಗಿಗಳಿಗೆ ಒದಗಿಸುತ್ತಿದ್ದ ಸೌಲಭ್ಯಗಳನ್ನು ನಳಂದಾ ಶಾಸನ ತಿಳಿಸುತ್ತದೆ.
  • ಮೇರೂರು ಶಾಸನದಲ್ಲಿ ಆಡಳಿತವು ಅರ್ಥಶಾಸ್ತ್ರ ಶುಕ್ರನೀತಿಗನುಗುಣವಾಗಿ ನಡೆಯುತ್ತಿತ್ತು ಎಂದು ತಿಳಿಸುತ್ತದೆ.
  • ಹಿಂದೆ ಸ್ತ್ರೀಯರಿಗಿದ್ದ ಸ್ಥಾನಮಾನಗಳನ್ನು ಶಾಸನಗಳು ತಿಳಿಸಿ ಕೊಡುತ್ತವೆ. ಕಾಶ್ಮೀರದ ರಾಣಿಯನ್ನು "ರಾಜನ್" ಎಂದು ಪುಲ್ಲಿಂಗದಲ್ಲಿ ಸ್ತುತಿಸುತ್ತದೆ.
  • ಪ್ರಾಚೀನ ವಿದ್ಯಾಭ್ಯಾಸ ಪದ್ಧತಿಯನ್ನು ಶಾಸನಗಳು ತಿಳಿಸುತ್ತವೆ. ಅಲ್ಲದೇ ಬೌದ್ಧ, ಜೈನ, ಶೈವ, ವೈಷ್ಣವ ಮುಂತಾದ ವಿವಿಧ ಧರ್ಮಗಳ ಚರಿತ್ರೆಯನ್ನು ಶಾಸನಗಳಿಂದಲೇ ಸಂಗ್ರಹಿಸಬಹುದು.‌ ಶ್ರವಣ ಬೆಳಗೊಳದ ಶಾಸನಗಳು ಕರ್ನಾಟಕದಲ್ಲಿ ಜೈನ‌ಪರಂಪರೆ ಇತಿಹಾಸವನ್ನು ಕುರಿತು ರಚಿಸಲು ಮುಖ್ಯ ಆಕರವಾಗಿವೆ.
  • ಕನ್ನಡದ ಮೊಟ್ಟಮೊದಲ ಶಾಸನವೆಂದರೆ ಉಪಲಬ್ಧವಾಗಿರುವ ಹಲ್ಮಿಡಿ ಶಾಸನ (ಕ್ರಿ ಶ ಐದನೇ ಶತಮಾನ). ನಂತರ ಕನ್ನಡದ ಶಾಸನ ದೊರೆಯುವುದು ಕ್ರಿ.ಶ ಏಳನೇ ಶತಮಾನದಲ್ಲಿ. ಅದು ಬಾದಾಮಿ ಮತ್ತು ಶ್ರವಣ ಬೆಳಗೊಳದಲ್ಲಿ. 'ಶಾಸನಗಳು ಕನ್ನಡ ಸಾಹಿತ್ಯದ ತಲಕಾವೇರಿ' ಎನ್ನುತ್ತಾರೆ ಚಿ.ಮೂ. 
ಉಪಸಂಹಾರ

ಕನ್ನಡ ಶಾಸನಗಳು ಅಪರಿಮಿತವಾದ ಅತೀ ಮುಖ್ಯವಾದ ಮೂಲ ಸಾಮಗ್ರಿಗಳನ್ನು ಹೊಂದಿದ್ದು, ಕರ್ನಾಟಕದ ಇತಿಹಾಸ ಪುನಾರಚನೆ ಮಾತ್ರವಲ್ಲದೇ, ಸಮಸ್ತ ಭವ್ಯ ಭಾರತದ ಇತಿಹಾಸ ರಚನೆಗೂ ಆಕರವಾಗಿದೆ. ಶಾಸನಗಳು ಒಂದು ನಿರ್ದಿಷ್ಟ ಪ್ರದೇಶದ, ಕಾಲಘಟ್ಟದ, ಜನಸಮುದಾಯದ ಜೀವನವನ್ನು ಕಟ್ಟಿಕೊಡುತ್ತದೆ. ನಮ್ಮ ಹಿಂದಿನವರ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಬದುಕನ್ನು ಶಾಸನಗಳಿಂದ ತಿಳಿಯಬಹುದಾಗಿದೆ.

(ವಿವಿಧ ಮೂಲಗಳಿಂದ)

*************
ಕೆ.ಎ.ಸೌಮ್ಯ
ಮೈಸೂರು

(ಎಂ.ಎ.ಕನ್ನಡ)

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)