ಕಪ್ಪೆ ಅರಭಟ್ಟನ ಶಾಸನ

ಪೀಠಿಕೆ

ಕಪ್ಪೆ ಅರಭಟ್ಟನ ಶಾಸನ ವಿಜಾಪುರ ಜಿಲ್ಲೆಯ ಬಾದಾಮಿ ತಾಲ್ಲೂಕಿಗೆ ಸಮೀಪದ ಬಂಡೆಗಲ್ಲಿನ ಮೇಲೆ ದೊರೆತಿದೆ. ಈ ಶಾಸನವು ಕನ್ನಡದಲ್ಲಿ ವಿರಳವಾಗಿ ದೊರೆಯುವ ಬಂಡೆಗಲ್ಲಿನ ಶಾಸನದಲ್ಲಿ ಒಂದಾಗಿದೆ. ಈ ಶಾಸನ ಹಾಕಿಸುವಾಗ ಯಾವ ರಾಜ ಆಡಳಿತ ನಡೆಸುತ್ತಿದ್ದ ಎಂಬ ಮಾಹಿತಿ ನಮಗೆ ಲಭ್ಯವಿಲ್ಲ. ಕನ್ನಡ ಭಾಷೆಯಲ್ಲಿರುವ ಈ ಶಾಸನ ಕಪ್ಪೆ ಅರಭಟ್ಟ ಎಂಬುವವನನ್ನು ಕೀರ್ತಿಸಿವೆ. 

ಇದು ಪದ್ಯವೇ ಅಥವಾ ಗದ್ಯವೇ ಎನ್ನುವುದರ ಬಗ್ಗೆ ಕೂಡ ಇನ್ನೂ ಚರ್ಚೆ ನಡೆಯುತ್ತಲೇ ಇದೆ. ಇದರಲ್ಲಿ ಪ್ರಾಚೀನ ಕನ್ನಡದ ಅವಶ್ಯ ಲಕ್ಷಣವಾದ ಪ್ರಾಸ ಇರದೇ ಇರುವುದರಿಂದ ಇದನ್ನು ಗದ್ಯವೆಂದೇ ತಿಳಿಯಬೇಕಾಗಿದೆ. ನಂತರ ಬರುವ ಮೂರು ತ್ರಿಪದಿಗಳಲ್ಲಿ ಕಪ್ಪೆ ಅರಭಟ್ಟನ ಸ್ವಭಾವ ಚಿತ್ರಣ ಮೂಡಿ ಬಂದಿದೆ.

ಪ್ರಾಣಕ್ಕಿಂತಾ ಹೆಚ್ಚಾಗಿ ತಾನು ನಂಬಿಕೊಂಡು ಬಂದಿರುವ ಜೀವನ ಶ್ರದ್ಧೆ, ಸ್ವಾಭಿಮಾನವೇ ದೊಡ್ಡದು ಎಂದು ಅದರಂತೆ ಜೀವಿಸಿದ ವ್ಯಕ್ತಿಯ ಚಿತ್ರಣ ಇಲ್ಲಿದೆ. ಇದನ್ನು ನೋಡಿದರೆ ಈ ಶಾಸನ ಕಪ್ಪೆ ಅರಭಟ್ಟ ಬದುಕಿದ್ದಾಗ ಹಾಕಿಸಿದಂತೆ ಕಾಣುವುದಿಲ್ಲ. ಬಹುಶಃ ಅವನ ಮರಣದ ನಂತರ ಹಾಕಿಸಿರಬಹುದೆಂದು ತೋರುತ್ತದೆ. ಹಾಗಾಗಿ ಇದು ಪ್ರಶಸ್ತಿ ಶಾಸನವಲ್ಲ. ಇದೊಂದು ವೀರಗಲ್ಲು. ಶಾಸನದ ಕಾಲ ಸುಮಾರು ಕ್ರಿ.ಶ.7ನೇ ಶತಮಾನ

ಈ ಶಾಸನ ಪ್ರಕಟಿಸಿದವರು ಜೆ.ಎಫ್.ಫ್ಲೀಟ್.

ಕಪ್ಪೆ ಅರಭಟ್ಟನ ಶಾಸನದ ಮಹತ್ವ :

  • ಕರ್ನಾಟಕದ ಪ್ರಾಚೀನ ಜನಜೀವನದಲ್ಲಿ ವೀರಜೀವನಕ್ಕೆ ತುಂಬಾ ಪ್ರಾಶಸ್ತ್ಯವಿದ್ದುದನ್ನು ಶಾಸನ ಎತ್ತಿ ಹೇಳುತ್ತದೆ. 
  • ವೀರನಾದವನು ತನ್ನ ಜೀವನದಲ್ಲಿ ಶಿಷ್ಟರಕ್ಷಣೆ ಮತ್ತು ದುಷ್ಟಶಿಕ್ಷಣೆ ಎಂಬ ಆದರ್ಶ ಪರಿಪಾಲಿಸುತ್ತಿದ್ದ ಎಂದು ತಿಳಿದು ಬರುತ್ತದೆ.
  • ವೀರನು ತನ್ನ ಪ್ರಾಣಕ್ಕಿಂತ ಮಾನವೇ ದೊಡ್ಡದು ಎಂಬುದಾಗಿ ಬದುಕಿದ್ದ ಎಂಬುದಾಗಿ ಈ ಶಾಸನ ತಿಳಿಸುತ್ತದೆ.
  • ಶಾಸನದಲ್ಲಿ ತ್ರಿಪದಿಯ ಬಳಕೆ ಇದ್ದು ಮುಂದೆ ಇದೇ ರೀತಿಯ ತ್ರಿಪದಿಯ ಬಳಕೆಗೆ ಇದು ಪ್ರೇರಣೆ ನೀಡುತ್ತದೆ.

  • ಶಾಸನವು ಕನ್ನಡ ಭಾಷಾ ಸೌಂದರ್ಯದ ಕುರಿತಾಗಿದೆ.

  • ಶಾಸನವು ಕನ್ನಡದ ದೇಶೀಯ ಛಂಧಸ್ಸಾದ ತ್ರಿಪದಿಯ ರಚನೆಯನ್ನು ಒಳಗೊಂಡಿದ್ದು ಸಂಸ್ಕೃತ ಭಾಷೆಯ ವೃತ್ತಗಳ ರಚನೆಗಳ ನಡುವೆ ಇದು ಪ್ರತ್ಯೇಕತೆಯನ್ನು ಕಾಯ್ದುಕೊಂಡಿದೆ.

ಕಪ್ಪೆ ಅರಭಟ್ಟನ್ :

ಫ್ಲೀಟ್ ಸೇರಿದಂತೆ ಎಲ್ಲರೂ ಈ ಶಬ್ದವನ್ನು ಕಪ್ಪೆ + ಅರಭಟ್ಟನ್ ಎಂದೇ ವಿಭಾಗ ಮಾಡಿ ಸಂಗ್ರಹಿಸಿದ್ದಾರೆ. ಆದರೆ "ಅರಭಟ್ಟನ್" ಎಂಬ ಹೆಸರು ಈವರೆಗೆ ತಿಳಿದಂತೆ ಯಾವುದೇ ಕನ್ನಡ ಶಾಸನಗಳಲ್ಲಾಗಲೀ ಅಥವಾ ಸಾಹಿತ್ಯ ಗ್ರಂಥಗಳಲ್ಲಾಗಲೀ ಕಂಡು ಬಂದಿಲ್ಲ. ಇಲ್ಲಿ ಎರಡು ಅರ್ಥ ಘಟಕಗಳಿವೆ. ಅರ + ಭಟ್ಟನ್. 

ಭಟ್ಟ ಎಂಬುದು ಸಂಸ್ಕೃತದಲ್ಲಿ ಪರಿಚಿತವಾದ ಪದ. ಇದರ ಪೂರ್ವ ಪದ ಅರ ಎಂಬುದಕ್ಕೂ ಸಂಸ್ಕೃತದಲ್ಲಿ ಅರ್ಥವಿದ್ದರೂ ಪ್ರಸ್ತುತದಲ್ಲಿ ಅದು ಹೊಂದುವುದಿಲ್ಲ. ಹಾಗಾಗಿ 'ಭಟ್ಟ' ಎಂಬ ಪದ 'ಅರ' ಎಂಬ ಪದದೊಂದಿಗೆ ಸೇರಿ ಬರುವುದು ಅಸಂಭವ. ಆದರೆ ಕಪ್ಪೆ ಅರಭಟ್ಟನ್ ಎಂಬಲ್ಲಿ ಕಪ್ಪೆ ಅರನೆಂಬ ಭಟ್ಟ ಎಂಬರ್ಥ ಕೊಟ್ಟರೂ, ಕಪ್ಪೆ ಎಂಬ ಶಬ್ದ ಏನು ಹೇಳುತ್ತದೆ ಎಂದು ತಿಳಿಯುವುದಿಲ್ಲ. ಹಾಗಾಗಿ ಕಪ್ಪೆ ಅರಭಟ್ಟ ಎಂಬ ಶಬ್ದದ ಅರ್ಥ ಅನಿರ್ದಿಷ್ಟವಾಗಿಯೇ ಉಳಿದಿದೆ.  

"ಕಪ್ಪೆ ಅರಭಟ್ಟನ್ ಶಿಷ್ಟಜನ ಪ್ರಿಯನ್

ದುಷ್ಟಜನ ವರ್ಜಿತನ್ ಕಲಿಯುವ ವಿಪರೀತನ್"

ಭಾವಾರ್ಥಶಾಸನದ ಕೇಂದ್ರ ವ್ಯಕ್ತಿ ಕಪ್ಪೆ ಅರಭಟ್ಟ. ಈಗ ಒಳ್ಳೆಯವರಿಗೆ ಪ್ರಿಯನಾದವನು. ಕೆಟ್ಟ ಜನರಿಗೆ ಬೇಡವಾದವನು ಎಂಬರ್ಥ ಬರುತ್ತದೆ.


ಮೊದಲನೆಯ ತ್ರಿಪದಿ:

"ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯನ್

ಬಾದಿಪ್ಪ ಕಲಿಗೆ ಕಲಿಯುವ ವಿಪರೀತನ್

ಮಾಧವನೀತ ಪೆರನಲ್ಲ"

"ಫ್ಲೀಟ್ ಮತ್ತು ಮುಂತಾದವರು ಈ ತ್ರಿಪದಿಗೆ ನಾನಾ ರೀತಿಯ ಅರ್ಥಗಳನ್ನು ನೀಡಿದ್ದಾರೆ"

ಸಾಧುಗೆ ಸಾಧುಸಾಧುವಾದ ವಿಷಯದಲ್ಲಿ ಸಾಧುವಾಗಿ ನಡೆದುಕೊಳ್ಳುತ್ತಾನೆ ಈತ. 'ಸಾಧು' ಎಂಬ ಪದಕ್ಕೆ ಒಳ್ಳೆಯ, ಯೋಗ್ಯ, ತಕ್ಕ, ನಿರುಪದ್ರವಿ ಎಂಬ ಅರ್ಥವಿದೆ.

ಮಾಧುರ್ಯಂಗೆ ಮಾಧುರ್ಯನ್: ಮಧುರಗುಣ ಉಳ್ಳವನು ಮಧುರ್ಯನ್ ಆಗುತ್ತಾನೆ. ಆದರೆ ಇಲ್ಲಿರುವ ಪದ ಮಾಧುರ್ಯನ್. ಈ ಶಬ್ದ ಮಹಾ + ಧುರ್ಯನ್ = ಮಾಧುರ್ಯನ್ ಆಗಿರಬೇಕೆಂದು ತೋರುತ್ತದೆ. ಮಹಾ ಮತ್ತು ಧುರ್ಯನ್ ಪರಿಚಿತ ಸಂಸ್ಕೃತ ಪದ. ಮಹಾ + ದೇವನ್ = ಮಾದೇವನ್ ಆದ ಹಾಗೆ. "ಧುರ್ಯ" ಎಂದರೆ ಮುಂಚೂಣಿಯಲ್ಲಿರುವವನು, ಅಗ್ರಗಣ್ಯನಾದವನು ಎಂದರ್ಥ. ಒಟ್ಟು ಸೇರಿಸಿ ಕಪ್ಪೆ ಅರಭಟ್ಟ ಎಂಬ ವ್ಯಕ್ತಿ ಕಾರ್ಯನಿರ್ವಹಣೆಯ ಸಾಮರ್ಥ್ಯವುಳ್ಳ ಪ್ರಮುಖನಾಗಿದ್ದ ಎಂದೆನಿಸುತ್ತದೆ.

ಬಾದಿಪ್ಪ ಕಲಿಗೆ ಕಲಿಯುವ ವಿಪರೀತನ್ : ಬಾಧಿಸುವ ಕಲಿ ಪುರುಷನಿಗೆ ಕಲಿಯುವದ ನಡವಳಿಕೆಗೆ ವಿರುದ್ಧವಾಗಿ ನಡೆಯುವವನು. 

ಮಾಧವನೀತ ಪೆರನಲ್ಲ : ಈತ ಸಾಕ್ಷಾತ್ ವಿಷ್ಣು ಬೇರೆಯಲ್ಲ. 


ಛಂದೋ ವಿವೇಚನೆ :

"ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯನ್

ಬಾದಿಪ್ಪ ಕಲಿಗೆ ಕಲಿಯುವ ವಿಪರೀತನ್

ಮಾಧವನೀತ ಪೆರನಲ್ಲ"

ಈ ತ್ರಿಪದಿಯ ಸಾಮಾನ್ಯ ನಿಯಮ ಹೀಗಿದೆ :

"ವಿಷ್ಣು ವಿಷ್ಣು ವಿಷ್ಣು ವಿಷ್ಣು

ವಿಷ್ಣು ಬ್ರಹ್ಮ ವಿಷ್ಣು ವಿಷ್ಣು

ವಿಷ್ಣು ಬ್ರಹ್ಮ ವಿಷ್ಣು"

 

ಭಾಷಾ ವಿವೇಚನೆ :

ಕಪ್ಪೆ ಅರಭಟ್ಟನ ಬಾದಾಮಿ ಶಾಸನ ಕನ್ನಡದ ಪ್ರಾಚೀನ ಶಾಸನಗಳಲ್ಲಿ ಒಂದು. ಇದರ ಕಾಲ ಸುಮಾರು ಕ್ರಿ,ಶ 700. ಕನ್ನಡ ನಾಡಿನ ಸಾಮಾಜಿಕ ಚಿತ್ರಣವನ್ನು ನೀಡುವವರು ಕಪ್ಪೆ ಅರಭಟ್ಟನ ಜೀವನದ ರೀತಿಯನ್ನು ತಪ್ಪದೆ ಉಲ್ಲೇಖಿಸುತ್ತಾರೆ. ಸಂಸ್ಕೃತ ಶ್ಲೋಕದಲ್ಲಿ ಬರುವ ಉದಾತ್ತ ಜೀವನ ಚಿತ್ರಣ, ಪ್ರಾಣಕ್ಕಿಂತಲೂ ನಂಬಿದ ಜೀವನ ಶ್ರದ್ಧೆ, ಪ್ರಾಮಾಣಿಕತೆಗಳೇ ಮುಖ್ಯ ಎಂಬ ಸಂದೇಶ ಇಡಿಯ ಶಾಸನದ ಮುಖ್ಯ ಸಂಗತಿಯಾಗಿದೆ.

ಬಾದಾಮಿ ಶಾಸನವು ತ್ರಿಪದಿಯಲ್ಲಿ ರಚಿತವಾಗಿದ್ದರೂ ಜನಪದವಾಗಿರದೇ ಪ್ರೌಢ ರಚನೆಯಾಗಿದ್ದು. ಪಂಡಿತ ರಚನೆಯೆಂದು ತೋರುತ್ತದೆ. ಈ ಶಾಸನದ ಮುಖ್ಯ ಭಾಗವಾದ ಮೂರು ತ್ರಿಪದಿಗಳಲ್ಲಿ ಸಂಸ್ಕೃತ ಮತ್ತು ಕನ್ನಡ ಬೆರೆತ ಹದವಾದ ಭಾಷೆಯ ಮಿಶ್ರಣವಿದೆ.

'ಸಜ್ಜನ' ಎಂಬುದಕ್ಕೆ ಹೇಳುವ ಕಲಿಯುವ ವಿಪರೀತನ್ ಒಂದು ಅಲಂಕಾರೋಕ್ತಿಯಾಗಿದೆ. 'ಕೃತಯುಗ ಚರಿತನ್' ಪದವನ್ನು ಇದರೊಂದಿಗೆ ಹೋಲಿಸಬಹುದು. 

ಉಪಸಂಹಾರ :

ಕಪ್ಪೆ ಅರಭಟ್ಟ ಶಾಸನವು ಕನ್ನಡದ ಮಹತ್ವದ ಬಂಡೆಗಲ್ಲಿನ ಶಾಸನವಾಗಿದೆ. ಶಾಸನದಲ್ಲಿ ಕನ್ನಡದ ದೇಸೀ ಛಂದೋರೂಪದ ತ್ರಿಪದಿಯ ಬಳಕೆಯಿದ್ದು, ಮುಂದೆ ತ್ರಿಪದಿಯ ಬಳಕೆಗೆ ಪ್ರೇರಣೆ ನೀಡುತ್ತದೆ. ಶಾಸನಲ್ಲಿ ಕನ್ನಡ ಮತ್ತು ಸಂಸ್ಕೃತ ಶಬ್ದಗಳು ಹದವಾಗಿ ಬೆರೆತಿವೆ. ಸಂಸ್ಕೃತ ಶ್ಲೋಕಗಳೂ ಇದ್ದು. ವೀರನಾದವನಿಗೆ ಪ್ರಾಣಕ್ಕಿಂತ ತಾನು ನಂಬಿಕೊಂಡು ಬಂದ ಆದರ್ಶ, ಸ್ವಾಭಿಮಾನವೇ ಮುಖ್ಯ ಎಂಬುದನ್ನು ಈ ಶ್ಲೋಕ ಸೂಚಿಸುತ್ತದೆ.

ಹಾಗಾಗಿ ಕಪ್ಪೆ ಅರಭಟ್ಟ ಎಂಬ ವ್ಯಕ್ತಿ ಯಾವುದೋ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ತಿಳಿಯುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಇದು ಪ್ರಶಸ್ತಿ ಶಾಸನವಲ್ಲ. ಇದೊಂದು ವೀರಗಲ್ಲು ಎಂದೇ ಭಾವಿಸಬೇಕಾಗಿದೆ.

ಶಾಸನದಲ್ಲಿರುವ "ಕಪ್ಪೆ ಅರಭಟ್ಟ", "ಕಲಿಯುವ ವಿಪರೀತನ್", "ಮಾಧುರ್ಯಂಗೆ ಮಾಧುರ್ಯನ್" ಮುಂತಾದ ಪದಗಳ ನಿಜರೂಪದ ಬಗ್ಗೆ ವಿದ್ವಾಂಸರಲ್ಲಿಯೂ ಹಲವು ಚರ್ಚೆಗಳು ನಡೆದಿವೆ. ಒಟ್ಟಿನಲ್ಲಿ ಕನ್ನಡದ ಮಹತ್ವದ ಶಾಸನ ಇದಾಗಿದ್ದು, ಆಗಿನ ಕಾಲದಲ್ಲಿ ಜನರು ವೀರತನಕ್ಕೆ ಬೆಲೆ ಕೊಡುತ್ತಿದ್ದರು ಎಂದು ಇದರಿಂದ ತಿಳಿಯುತ್ತದೆ.

(ವಿವಿಧ ಮೂಲಗಳಿಂದ)

***************

ಕೆ,ಎ,ಸೌಮ್ಯ, ಮೈಸೂರು

 

*****************

ಕಪ್ಪೆ ಅರಭಟ್ಟನ ಶಾಸನ ಪರಿಚಯಿಸಿ

********************

(ಎಂ.ಎ.ಕನ್ನಡ 2013) 

 


ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)