ಕಪ್ಪೆ ಅರಭಟ್ಟ (ಟಿಪ್ಪಣಿ)

ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ ವಿಜಾಪುರ ಜಿಲ್ಲೆಯ ಬಾದಾಮಿ ತಾಲೂಕಿನ ಬಾದಾಮಿಗೆ ಸಮೀಪವಿರುವ ತಟ್ಟುಕೋಟೆ ಎಂಬಲ್ಲಿ ಬಂಡೆಗಲ್ಲಿನ ಮೇಲೆ ಕೊರೆದಿರುವ ಶಾಸನವಾಗಿದೆ. ಈ ಶಾಸನ ಯಾವ ರಾಮ ಮನೆತನದ ಕಾಲದಲ್ಲಿ ಹುಟ್ಟಿತು, ಆಗ ಆಳ್ವಿಕೆಯಲ್ಲಿದ್ದ ರಾಜ ಯಾರು ಎಂಬ ಬಗ್ಗೆ ಶಾಸನದಲ್ಲಿ ಯಾವ ಸಾಕ್ಷ್ಯಾಧಾರಗಳೂ ಇಲ್ಲ. ಕರ್ನಾಟಕದಲ್ಲಿ ವಿರಳವಾಗಿ ದೊರೆಯುವ ಬಂಡೆಗಲ್ಲು ಶಾಸನಗಳಲ್ಲಿ ಇದೂ ಒಂದಾಗಿದೆ. ಕನ್ನಡ ಭಾಷೆಯಲ್ಲಿರುವ ಈ ಶಾಸನ ಕಪ್ಪೆ ಅರಭಟ್ಟ ಎಂಬುವವನನ್ನು ಕೀರ್ತಿಸಿದೆ. 

ಆದರೆ ಇದು ಪದ್ಯವೇ ಅಥವಾ ಗದ್ಯವೇ ಎಂಬ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಲೇ ಇದೆ. 

ಇದರಲ್ಲಿ ತನ್ನ ಪ್ರಾಣಕ್ಕಿಂತಾ ಹೆಚ್ಚಾಗಿ ತಾನು ನಂಬಿಕೊಂಡು ಬಂದಿರುವ ಶ್ರದ್ಧೆ, ಸ್ವಾಭಿಮಾನವೇ ದೊಡ್ಡದು ಎಂದು ಸಾರುವ ವ್ಯಕ್ತಿ ಚಿತ್ರಣವನ್ನು ಶಾಸನದಲ್ಲಿ ಕಾಣಬಹುದಾಗಿದೆ. ಬಹುಶಃ ಇದನ್ನು ವ್ಯಕ್ತಿಯ ಮರಣದ ನಂತರ ಹಾಕಿಸಿರಬಹುದಾದ ಸಾಧ್ಯತೆಯಿದೆ. ಹಾಗಾಗಿ ಇದು ಪ್ರಶಸ್ತಿ ಶಾಸನವಲ್ಲ. ಇದೊಂದು ವೀರಗಲ್ಲು ಎಂದೇ ಭಾವಿಸಬೇಕಾಗುತ್ತದೆ.  

"...ಕಪ್ಪೆ ಅರಭಟ್ಟನ್

ಶಿಷ್ಟಜನಪ್ರಿಯನ್

ಕಷ್ಟಜನ ವರ್ಜಿತನ್

ಕಲಿಯುಗ ವಿಪರೀತನ್..."

ಭಾವಾರ್ಥಶಾಸನದ ಕೇಂದ್ರ ವ್ಯಕ್ತಿ ಕಪ್ಪೆ ಅರಭಟ್ಟ. ಈತ ಒಳ್ಳೆಯವರಿಗೆ ಒಳ್ಳೆಯವು. ಕೆಟ್ಟವರಿಗೆ ಬೇಡವಾದವನು. 

"ಸಾಧುಂಗೆ ಸಾಧು ಮಾಧುರ್ಯಂಗೆ ಮಾಧುರ್ಯನ್

ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್

ಮಾಧವನೀತ ಪೆರನಲ್ಲ..." 

ಭಾವಾರ್ಥ : ಒಳ್ಳೆಯವರಿಗೆ ಒಳ್ಳೆಯವನು. ಮಧುರಗುಣ ಉಳ್ಳವರಿಗೆ ಮಧುರವಾಗಿ ವರ್ತಿಸುವನು. ತೊಂದರೆ ಪಡಿಸುವ ದುಷ್ಟ ಜನರಿಗೆ ದುಷ್ಟನಂತೆ ಕಾಣಿಸುವನು. ಈತನು ಅಸಾಮಾನ್ಯ ಮಾಧವ ಆಗಿರುವನು. 

ಆದರೆ ಇದು ತೃಪ್ತಿಕರವಾದ ಅರ್ಥವಲ್ಲ. 

ಫ್ಲೀಟ್ ಮತ್ತು ನಂತರದ ವಿದ್ವಾಂಸರು ಇದಕ್ಕೆ ಬಗೆಬಗೆಯಾದ ಅರ್ಥಗಳನ್ನು ನೀಡಿದ್ದಾರೆ. 

ಬಾದಾಮಿ ಶಾಸನದ ಕಾಲ--> ಸುಮಾರು ಕ್ರಿ.ಶ.700

ಕನ್ನಡ ನಾಡಿನ ಸಾಮಾಜಿಕ ಜೀವನದ ಸ್ವರೂಪವನ್ನು ವಿವೇಚಿಸುವವರು ಈ ಶಾಸನದಲ್ಲಿ ಚಿತ್ರಣಗೊಂಡಿರುವ ಕಪ್ಪೆ ಅರಭಟ್ಟನ ಸ್ವಭಾವ ಚಿತ್ರವನ್ನು ತಪ್ಪದೇ ಉಲ್ಲೇಖಿಸುತ್ತಾರೆ. ಉದಾತ್ತ ಜೀವನ ಧರ್ಮ, ಸುಸಂಸ್ಕೃತ ವ್ಯಕ್ತಿಗೆ ತನ್ನ ಪ್ರಾಣಕ್ಕಿಂತ ಮಾನವೇ ಮುಖ್ಯ ಎಂಬ ಸಂದೇಶ ಶಾಸನದ ಮುಖ್ಯ ಸಂಗತಿಯಾಗಿದೆ. ಪ್ರಾಚೀನ ಕಾಲದಲ್ಲಿ ಸಂಪತ್ತು, ವಿದ್ಯೆಗಳಿಗಿಂತಾ ವೀರ ಜೀವನವೇ ಜನಪ್ರಿಯವಾದ ಮೌಲ್ಯವಾಗಿತ್ತು ಎನ್ನುವುದನ್ನು ಇಲ್ಲಿ ನಿರೂಪಿಸಲಾಗಿದೆ. 


(ವಿವಿಧ ಮೂಲಗಳಿಂದ)

************

ಕೆ.ಎ.ಸೌಮ್ಯ, ಮೈಸೂರು

(ಎಂ.ಎ.ಕನ್ನಡ)

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)