ಹಲ್ಮಿಡಿ ಶಾಸನ (ಟಿಪ್ಪಣಿ)

ಚಿಕ್ಕಮಗಳೂರು ಜಿಲ್ಲೆಯ ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮದಲ್ಲಿ ಈ ಶಾಸನ ಕಂಡು ಬಂದಿದೆ. ಇದೊಂದು ವೀರಗಲ್ಲು. ಈ ಶಾಸನವನ್ನು ಹಾಕಿಸಿದ್ದ ಕಾಲದಲ್ಲಿ ಕದಂಬ ವಂಶದ ದೊರೆ ಕಾಕುತ್ಸ್ಥವರ್ಮ ಆಳುತ್ತಿದ್ದನೆಂದು ಶಾಸನದಿಂದ ತಿಳಿದುಬರುತ್ತದೆ. ಈತನ ಕಾಲ ಐದನೆಯ ಶತಮಾನ. ಹಾಗಾಗಿ ಈ ಶಾಸನ ಹುಟ್ಟಿದ ಕಾಲ ಸುಮಾರು ಕ್ರಿ.ಶ.450.

ಹಲ್ಮಿಡಿ ಶಾಸನದ ಕಾಲ --> ಕ್ರಿ.ಶ.450

ಹಲ್ಮಿಡಿ ಶಾಸನ ಗಾತ್ರದಲ್ಲಿ ಚಿಕ್ಕದಾದರೂ, ರಾಜಕೀಯ ಮತ್ತು ಸಾಮಾಜಿಕ ದೃಷ್ಟಿಯಿಂದ ಮಹತ್ವದ್ದೆಂದು ಭಾವಿಸಬೇಕಾಗಿದೆ. ಹಲ್ಮಿಡಿ ಶಾಸನ ನಮಗೆ ದೊರೆಯುವವರೆಗೂ ಚಾಲುಕ್ಯ ರಾಜ ಮಂಗಳೇಶನ ವೈಷ್ಣವ ಗುಹಾಶಾಸನವನ್ನೇ ಕನ್ನಡದ ಪ್ರಾಚೀನತಮ ಶಾಸನ ಎಂದು ತಿಳಿಯಲಾಗಿತ್ತು. ಹಲ್ಮಿಡಿ ಶಾಸನ ದೊರೆತ ಮೇಲೆ ಅದು ಕನ್ನಡದ ಪ್ರಾಚೀನ ಶಿಲಾಶಾಸನ ಎಂಬ ಮನ್ನಣೆ ದೊರಕಿಸಿಕೊಂಡಿತು. 

ಹಲ್ಮಿಡಿ --> ಕನ್ನಡದ ಮೊಟ್ಟಮೊದಲ ಶಾಸನ

ಈ ಶಾಸನದ ಮೂಲಕ ಐದು ಆರನೆಯ ಶತಮಾನಗಳಷ್ಟು ಹಿಂದೆ ಕನ್ನಡ ಭಾಷೆಯ ರಚನೆಗಳು ಯಾವ ರೀತಿಯಲ್ಲಿ ಇದ್ದವೆಂದು ನಾವು ತಿಳಿಯಬಹುದಾಗಿದೆ. ಕನ್ನಡ ಭಾಷೆಯ ಆರಂಭದ ಶಾಸನಗಳು ಪದ್ಯನಿಬದ್ಧವಾಗಿದ್ದರೆ, ಹಲ್ಮಿಡಿ ಶಾಸನ ಗದ್ಯನಿಬದ್ಧವಾಗಿದೆ. ಕನ್ನಡ ಸಾಹಿತ್ಯದಲ್ಲಿ ಗದ್ಯದ ಉಗಮ ಮತ್ತು ವಿಕಾಸಗಳನ್ನು ಕುರಿತು ಚರ್ಚೆ ಮಾಡುವಾಗ ಅವಶ್ಯಕವಾಗಿ ಹಲ್ಮಿಡಿ ಶಾಸನವನ್ನು ಗಮನಿಸಬೇಕಾಗುತ್ತದೆ‌ 

ಈ ಶಾಸನದಲ್ಲಿ ವೀರನೊಬ್ಬನಿಗೆ ಗೌರವ ಸಮರ್ಪಣೆ ಮಾಡಿದ ಸಂಗತಿಯಿದೆ. 'ವಿಜ ಅರಸ' ಎಂಬುವವನೇ ಇಲ್ಲಿ ಗೌರವಕ್ಕೆ ಪಾತ್ರನಾದ ವ್ಯಕ್ತಿ. ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿ ವಿಜ ಅರಸನಿಗೆ 'ಪಲ್ಮಡಿ' ಮತ್ತು 'ಮೂನವಳ್ಳಿ' ಗ್ರಾಮಗಳನ್ನು ದಾನ ನೀಡಿದ ವಿಷಯವಿದೆ‌. 

ಯುದ್ಧದಲ್ಲಿ ಹೋರಾಡಿದ ವೀರರ ಕತ್ತಿಗಳನ್ನು ತೊಳೆದು ಗೌರವ ತೋರಿಸುವ ಪದ್ಧತಿಯಾದ "ಬಾಳ್ಗಚ್ಚು"ವಿನೊಡನೆ ಈ ದಾನವನ್ನು ನೀಡಲಾಗಿದೆ

ಇದು ಸಾಂಸ್ಕೃತಿಕವಾಗಿ ಗಮನಿಸಬೇಕಾದ ವಿಷಯವಾಗಿದೆ.

(ವಿವಿಧ ಮೂಲಗಳಿಂದ)

***************

ಕೆ.ಎ.ಸೌಮ್ಯ, ಮೈಸೂರು

(ಎಂ.ಎ.ಕನ್ನಡ)

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)