ಹಲ್ಮಿಡಿ ಶಾಸನದ ಚಾರಿತ್ರಿಕ, ಧಾರ್ಮಿಕ, ಸಾಮಾಜಿಕ ಸಂಗತಿ

ಪೀಠಿಕೆ

ಹಲ್ಮಿಡಿ ಶಾಸನವು ಕನ್ನಡದ ಮೊಟ್ಟಮೊದಲ ಉಪಲಬ್ಧ ಶಾಸನವಾಗಿದೆ. ಈ ಶಾಸನವನ್ನು ಸಂಪಾದಿಸಿದವರು ಎಂ.ಎಚ್.ಕೃಷ್ಣ ಅವರು. ಈ ಶಾಸನವು ಚಿಕ್ಕಮಗಳೂರು ಜಿಲ್ಲೆಯ ಬೇಲೂರು ತಾಲ್ಲೂಕಿನ ಬಳಿ ದೊರೆತಿದೆ. ಈ ಶಾಸನದ ಕಾಲ ಸುಮಾರು ಕ್ರಿ.ಶ. 450. ಈ ಶಾಸನದ ಕಾಲದಲ್ಲಿ ಕದಂಬ ವಂಶದ ಕಾಕುತ್ಸ್ಥವರ್ಮನು ಆಳ್ವಿಕೆ ಮಾಡುತ್ತಿದ್ದನೆಂದು ತಿಳಿದು ಬರುತ್ತದೆ. 

ಶಾಸನವು ಗದ್ಯ ರೂಪದಲ್ಲಿ ಇರುವುದರಿಂದ ಕನ್ನಡ ಗದ್ಯ ಇತಿಹಾಸದ ಅಧ್ಯಯನಕ್ಕೆ ನಾವು ಹಲ್ಮಿಡಿ ಶಾಸನವನ್ನು ಗಮನಿಸಲೇಬೇಕಾಗುತ್ತದೆ. 

ಇದೊಂದು ಪ್ರಶಸ್ತಿ ಶಾಸನವಾಗಿದ್ದು, ವೀರನೊಬ್ಬನ ಶೌರ್ಯಕ್ಕೆ ಮೆಚ್ಚಿ ಆತನಿಗೆ ಉಡುಗೊರೆ ನೀಡಿರುವ ವಿವರಗಳನ್ನು ಒಳಗೊಂಡ ಶಾಸನವಾಗಿದೆ. 'ವಿಜ ಅರಸ' ಎಂಬುವವನೇ ಆ ಗೌರವಕ್ಕೆ ಪಾತ್ರನಾದ ವ್ಯಕ್ತಿ. ಆತ ಯುದ್ಧದಲ್ಲಿ ತೋರಿದ ಶೌರ್ಯಕ್ಕಾಗಿ ಪಲ್ಮಿಡಿ ಮತ್ತು ಮೂನವಳ್ಳಿ ಗ್ರಾಮಗಳನ್ನು ಬಾಳ್ಗಚ್ಚು ಕೊಡುಗೆಯಾಗಿ ನೀಡಿರುವುದಾಗಿ ಶಾಸನದಿಂದ ತಿಳಿದುಬರುತ್ತದೆ. 

ಹಲ್ಮಿಡಿ ಶಾಸನದ ಚಾರಿತ್ರಿಕ ಮಹತ್ವ

  • ಈ ಶಾಸನವನ್ನು ಹಾಕಿಸಿದ್ದ ಕಾಲದಲ್ಲಿ ಕದಂಬ ವಂಶದ ದೊರೆ ಕಾಕುತ್ಸ್ಥವರ್ಮ ಆಳ್ವಿಕೆ ನಡೆಸುತ್ತಿದ್ದ ಎಂದು ತಿಳಿದು ಬರುತ್ತದೆ.
  • ಈ ಶಾಸನ ಸಿಗುವವರೆಗೆ ಬಾದಾಮಿಯ ಚಾಳುಕ್ಯರ ಅರಸನಾದ ಮಂಗಳೇಶನ ವೈಷ್ಣವ ಗುಹಾಶಾಸನವೇ ಅತ್ಯಂತ ಪ್ರಾಚೀನ ಶಾಸನ ಎಂದು ತಿಳಿಯಲಾಗಿತ್ತು. ಈಗ ಹಲ್ಮಿಡಿ ಶಾಸನವು 'ಕನ್ನಡದ ಪ್ರಾಚೀನತಮ ಶಾಸನ' ಎಂಬ ಬಿರುದಿಗೆ ಪಾತ್ರವಾಗಿದೆ. 
  • ಈ ಶಾಸನದಲ್ಲಿ ಕದಂಬರು, ಅಳುಪರು, ಕಳಭ್ರರು ಬಾಣರು, ಕೇಕೆಯರು, ಪಲ್ಲವರು ಮುಂತಾದ ರಾಜಮನೆತನಗಳ ಪ್ರಸ್ತಾಪವಿದ್ದು, ಇವರ ನಡುವಿನ ರಾಜಕೀಯ ಸಂಬಂಧವನ್ನು ತಿಳಿಯಬಹುದಾಗಿದೆ.
  • ಹಲ್ಮಿಡಿ ಶಾಸನದಲ್ಲಿ ಉಲ್ಲೇಖಿತವಾಗಿರುವ ಬಟಾರಿಕುಲ, ಬಾಳ್ಗಚ್ಚು, ಅಳುಕದಂಬನ್ ಮುಂತಾದವು ಕರ್ನಾಟಕದ ಸಾಂಸ್ಕೃತಿಕ ಮಹತ್ವವನ್ನು ಕುರಿತು ಹೇಳುತ್ತದೆ. 
  • ಶಾಸನದಲ್ಲಿ ವಿಷ್ಣುವಿನ ಸ್ತುತಿಯೂ, ವಿಷ್ಣುವಿನ ಸುದರ್ಶನ ಚಕ್ರದ ಕೆತ್ತನೆಯೂ ಇರುವುದರಿಂದ ಕ್ರಿ.ಶ ಐದು ಮತ್ತು ಆರನೇ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ವೈಷ್ಣವ ಧರ್ಮದ ಪ್ರಸಾರ ಹೇಗಿದ್ದಿತು ಅಂತ ತಿಳಿಯಬಹುದಾಗಿದೆ.
  • ಹಲ್ಮಿಡಿ ಶಾಸನವು ಕನ್ನಡದಲ್ಲಿ ಉಪಲಬ್ಧವಿರುವ ಪ್ರಥಮ ಶಾಸನವಾಗಿರುವುದರಿಂದ, ಆಗಿ‌ನ ಕಾಲದಲ್ಲಿ ಕನ್ನಡ ಭಾಷೆಯ ಉಗಮ ಮತ್ತು ಬೆಳವಣಿಗೆ ಹೇಗಿದ್ದಿತು ಎಂದು ತಿಳಿಯಬಹುದಾಗಿದೆ‌. ಸಾಮಾನ್ಯವಾಗಿ ಶಾಸನಗಳು ಪದ್ಯ ನಿಬದ್ಧವಾಗಿರುತ್ತಿದ್ದವು. ಆದರೆ ಹಲ್ಮಿಡಿ ಶಾಸನ ಗದ್ಯ ನಿಬದ್ಧವಾಗಿದೆ.‌ ಹಾಗಾಗಿ ಹಲ್ಮಿಡಿ ಶಾಸನದ ಅಧ್ಯಯನದಿಂದ ಅಂದಿನ ಕಾಲದ ಭಾಷೆಯ ಸ್ಥಿತಿಗತಿಗಳನ್ನು ‌ತಿಳಿಯಬಹುದಾಗಿದೆ. 
  • ಈ ಶಾಸನದ ಚರಿತ್ರಾಂಶಗಳನ್ನು ತಿಳಿಯಲು ವಿವರಗಳು ಸಾಲುವುದಿಲ್ಲ. ಈ ಶಾಸನವು ಕನ್ನಡದಲ್ಲಿ ಉಪಲಬ್ಧವಿರುವ ಪ್ರಥಮ ಶಾಸನವಾಗಿರುವುದರಿಂದ ಮಹತ್ವ ಪ್ರಾಪ್ತವಾಗಿದೆಯೇ ಹೊರತೂ, ಇದರ ಚಾರಿತ್ರಿಕ ಘಟನೆಗಳಿಂದಾಗಿ ಅಲ್ಲ. ಇದೊಂದು .
  • ಹಲ್ಮಿಡಿ ಶಾಸನದಲ್ಲಿ ಒಂದು ಯುದ್ಧದ ಪ್ರಸ್ತಾಪವಿದೆ. ಕದಂಬರು ಮತ್ತು ಅವರ ಮಿತ್ರರಾದ ಸೇಂದ್ರಕರು, ಬಾಣರು, ಅಳುಪರು ಒಂದು ಕಡೆ ಮತ್ತು ಪಲ್ಲವರು, ಕೇಕೇಯರು ಇನ್ನೊಂದು ಕಡೆ ನಿಂತು ಹೋರಾಡಿದರು ಎಂಬ ವಿವರವಿದೆ. 'ವಿಜ ಅರಸನು' ಕದಂಬರ ಪಕ್ಷದಲ್ಲಿ ನಿಂತು‌ ಪಲ್ಲವರನ್ನು ಸೋಲಿಸಿದ. ಇದರಿಂದ ಆತನಿಗೆ ಪಲ್ಮಡಿ ಮತ್ತು ಮೂನವಳ್ಳಿ ಗ್ರಾಮಗಳನ್ನು ಕತ್ತಿಯ ಕೊಡುಗೆಯಾಗಿ ದಾನ ಮಾಡಲಾಯಿತು ಎಂದು ಶಾಸನದಿಂದ ತಿಳಿದುಬರುತ್ತದೆ. 
ಹಲ್ಮಿಡಿ ಶಾಸನದ ಧಾರ್ಮಿಕ ಮಹತ್ವ
  • ಹಲ್ಮಿಡಿ ಶಾಸನದ ಆರಂಭದಲ್ಲಿ ವಿಷ್ಣು ಸ್ತುತಿಯಿದೆ. ಇದರಿಂದ ಕದಂಬರು ಶೈವರಾಗಿದ್ದರೂ, ವಿಷ್ಣುವಿನ ಅನುಯಾಯಿಗಳೂ ಆಗಿದ್ದರು ಎಂದು ತಿಳಿಯಬಹುದಾಗಿದೆ.
  • ಇದು ಆಗಿನ ಕಾಲದಲ್ಲಿ ವೈಷ್ಣವ ಮಠಕ್ಕೆ ಪ್ರಾಧಾನ್ಯತೆ ಇತ್ತೆಂಬುದನ್ನು ತೋರಿಸುತ್ತದೆ.
  • ಹಾಗೆಯೇ ಆಗಿನ ಕಾಲದಲ್ಲಿ ಹೋಮ ಹವನಗಳು ಬಹುವಾಗಿ ನಡೆಯುತ್ತಿತ್ತು ಎಂಬುದಕ್ಕೆ ಶಾಸನದಲ್ಲಿ ಸಾಕ್ಷಿಯಿದೆ. 
  • ಶಾಸನದಲ್ಲಿ 'ಪಶುಪ್ರದಾನ' ಎಂಬ ಮಾತು ಬರುತ್ತದೆ. ಅಂದರೆ ಇದು ಯಜ್ಞ ಯಾಗಾದಿಗಳಲ್ಲಿ ಅವಶ್ಯ ಕರ್ಮವಾಗಿದ್ದ ಪ್ರಾಣಿಬಲಿ ಅಥವಾ ಗೋದಾನವನ್ನು ಸೂಚಿಸುತ್ತದೆ.
ಹಲ್ಮಿಡಿ ಶಾಸನದ ಸಾಮಾಜಿಕ ಮಹತ್ವ

ಹಲ್ಮಿಡಿ ಶಾಸನದಲ್ಲಿ ಬರುವ ಬಾಳ್ಗಚ್ಚು ಎಂಬ ಪದ ಸಾಮಾಜಿಕವಾಗಿ ಬಹಳ ಮಹತ್ವ ಪಡೆದಿದೆ. ಇದರ ಕುರಿತು ಹಲವಾರು ವಿದ್ವಾಂಸರು ಚರ್ಚೆ ನಡೆಸಿದ್ದಾರೆ. 
  • ಬಾಳ್ಗಚ್ಚು ಎಂಬುದು ಒಂದು ವಿಶೇಷ ರೀತಿಯ ಪದ್ಧತಿಯಾಗಿದ್ದು, ಯುದ್ಧದಲ್ಲಿ ಹೋರಾಡಿ ಗೆದ್ದು ಬಂದ ವೀರನಿಗೆ ಅಥವಾ ಮೃತನಾದ ವೀರನ ಕುಟುಂಬಕ್ಕೆ ಸಲ್ಲುತ್ತಿದ್ದ ಒಂದು ಮರ್ಯಾದೆಯಾಗಿದೆ. ರಣದಲ್ಲಿ ಹೋರಾಡಿದ ವೀರನ ಕತ್ತಿಯನ್ನು ತೊಳೆಯುವ ಪದ್ಧತಿ ಇದೆಂದು ಈ ಪದ ಸೂಚಿಸುತ್ತದೆ. 
ಈ ಪದದ ವಿಗ್ರಹವಾಕ್ಯ : ಬಾಳನ್ + ಕಳ್ಚು ( ಕತ್ತಿಯನ್ನು ತೊಳೆ) 

ಉದಾ: ರನ್ನನ ಸಾಹಸ ಭೀಮ ವಿಜಯದಲ್ಲಿಯೂ ಭೀಮಸೇನನು ದುರ್ಯೋಧನನನ್ನು ಕೊಂದ ಮೇಲೆ ಕೃಷ್ಣ ಮುಂತಾದವರು ಅವನ ತೋಳನ್ನು ತೊಳೆದು ಪೂಜಿಸಿದರೆಂದು ವರ್ಣಿತವಾಗಿರುವುದು ಈ ಬಾಳ್ಗಚ್ಚು ವಿಧಿಯ ನೆನಪು ತರುವ ವಿಷಯವಾಗಿದೆ. 
  • ಬಾಳ್ಗಚ್ಚು ವಿಧಿಯನ್ನು ಕತ್ತಿ ತೊಳೆಯುವ ಪದ್ಧತಿ ಎಂದು ಡಾ.ಫ್ಲೀಟ್ ಅವರು ಕೂಡ ಊಹಿಸಿದ್ದಾರೆ. ಪ್ರಾಚೀನ ದ್ರಾವಿಡ ಪ್ರಾಂತ್ಯದಲ್ಲಿ ಈ ಹೆಸರಿನ ಆಚರಣೆ ಪ್ರಚಲಿತವಿತ್ತು ಎಂದು ಗೋಪಿನಾಥರಾವ್ ಅವರೂ ತಿಳಿಸಿದ್ದಾರೆ. 
  • ಹಾಗಾಗಿ ಹಲ್ಮಿಡಿ ಶಾಸನದಲ್ಲಿ  ಕದಂಬ ರಾಜನ ಪರವಾಗಿ ನಿಂತು ಯುದ್ಧಮಾಡಿ ಪಲ್ಲವರನ್ನು ಸೋಲಿಸಿದ 'ವಿಜ ಅರಸನಿಗೆ' ಬಾಳ್ಗಚ್ಚು ವಿಧಿಯನ್ವಯ ಪದ್ಧತಿ ಪೂರೈಸಲಾಗಿತ್ತೆಂದು ಉಕ್ತವಾಗಿವೆ.
  • ಶಾಸನದ ಪೂರ್ತಿ ಹಳಗನ್ನಡ ಬಳಕೆಯಾಗಿದ್ದು, ಕೆಲವು ಸಾಲುಗಳಲ್ಲಿ ಸಂಸ್ಕೃತದ ವರ್ಚಸ್ಸನ್ನು ಕಾಣಬಹುದಾಗಿದೆ. ಇದರಿಂದ ಹಳಗನ್ಬಡ ಭಾಷೆಯು ಪ್ರೌಢವೂ, ಗಂಭೀರವೂ ಆಗಿತ್ತು ಎಂದು ತಿಳಿಯಬಹುದಾಗಿದೆ. ಇದರಿಂದ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿನ ಸಂಬಂಧ ತಿಳಿಯುವುದಲ್ಲದೇ, ಸಂಸ್ಕೃತ ಸಮಾಸ ಪದಗಳಿಂದ ಕೂಡಿದ ಕನ್ನಡವು ಐದನೇ ಶತಮಾನದ ವೇಳೆಗೆ ಚೆನ್ನಾಗಿ ಬಳಕೆಗೆ ಬಂದಿರುವುದು ತಿಳಿದು ಬರುತ್ತದೆ. 
  • ಜನಸಾಮಾನ್ಯರ ನಡೆನುಡಿಗಳಲ್ಲಿ ಅಚ್ಚ ಕನ್ನಡವೂ, ಪ್ರೌಢರ ನಡೆನುಡಿಗಳಲ್ಲಿ ಸಂಸ್ಕೃತವೂ ಪ್ರಚಲಿತವಿದ್ದುದಾಗಿ ತಿಳಿಯಬಹುದಾಗಿದೆ.
  • ಕನ್ನಡ ಭಾಷೆಯಲ್ಲಿ ಅಸಹಜ ಪ್ರಯೋಗವಾದ 'ಕರ್ಮಣಿ' ಪ್ರಯೋಗವೂ ಈ ಶಾಸನದಲ್ಲಿ ಕಂಡುಬಂದಿದೆ. (ಕರ್ಮಣಿ ಪ್ರಯೋಗವನ್ನು ಸಾಮಾನ್ಯವಾಗಿ ಆಡುಭಾಷೆಯಲ್ಲಿ ಬಳಸುವುದಿಲ್ಲ) ಹಾಗಾಗಿ ಈ ಪ್ರಯೋಗ ಸಂಸ್ಕೃತ ಪ್ರಭಾವದಿಂದಲೇ ಎಂಬುದು ವಿದಿತವಾಗುತ್ತದೆ. 
ಉಪಸಂಹಾರ : 

ಹಲ್ಮಿಡಿ ಶಾಸನವು ಕನ್ನಡದ ಮೊದಲ ಉಪಲಬ್ಧ ಶಾಸನ. ಇದರ ರಚನೆಯ ಕಾಲ ಸುಮಾರು ಕ್ರಿ.ಶ. 450. ಬೇಲೂರು ಗ್ರಾಮದ ಹಲ್ಮಿಡಿ ಗ್ರಾಮದಲ್ಲಿ ಈ ಶಾಸನ ದೊರೆತಿದ್ದು, ಇದೊಂದು ದಾನಶಾಸನವಾಗಿದೆ‌. ಜೊತೆಗೆ ಇದೊಂದು ‌ವೀರಗಲ್ಲು ಕೂಡ. ಸಾಂಸ್ಕೃತಿಕ, ಭಾಷಿಕ, ಐತಿಹಾಸಿಕ ಕಾರಣಗಳಿಂದ ಈ ಶಾಸನಕ್ಕೆ ಕನ್ನಡ ಶಾಸನ ಸಾಹಿತ್ಯದಲ್ಲಿ ಮಹತ್ವದ ಸ್ಥಾನವಿದೆ. 

ಆದರೆ ಶಾಸನದಲ್ಲಿ ಉಕ್ತವಾಗಿರುವ ವ್ಯಕ್ತಿಗಳ ಹೆಸರುಗಳು ಮತ್ತು ವ್ಯಕ್ತವಾಗಿರುವ ವಸ್ತು, ವಿಷಯದೊಡನೆ ವಿದ್ವಾಂಸರ ನಡುವೆ ಇನ್ನೂ ಭಿನ್ನಾಭಿಪ್ರಾಯವಿದೆ. ಇನ್ನೂ ಎಲ್ಲರಿಗೂ ಏಕರೂಪ ತೀರ್ಮಾನಕ್ಕೆ ಬರಲಾಗಿಲ್ಲ.

ಆದರೂ ಈ ಶಾಸನದಲ್ಲಿ ರಾಜನೊಬ್ಬ ವೀರನಿಗೆ ಗೌರವ ಸಮರ್ಪಣೆ ಮಾಡಿರುವುದನ್ನು ಎಲ್ಲರೂ ಒಪ್ಪಿದ್ದಾರೆ. ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ವಿಜ ಅರಸ ಎಂಬ ವ್ಯಕ್ತಿಯೇ ಇಲ್ಲಿ ಗೌರವಕ್ಕೆ ಪಾತ್ರನಾಗಿರುವವನು. ಅದಕ್ಕಾಗಿ ಅವನಿಗೆ ಹಲ್ಮಿಡಿ ಮತ್ತು ಮೂನುವಳ್ಳಿ ಗ್ರಾಮಗಳನ್ನು ದಾನವಾಗಿ ನೀಡಲಾಗಿದೆ ಎಂದು ಶಾಸನದಲ್ಲಿ ಉಕ್ತವಾಗಿದೆ. ಅಲ್ಲದೇ ಯುದ್ಧದಲ್ಲಿ ಹೋರಾಡಿದ ರಕ್ತಸಿಕ್ತ ಖಡ್ಗವನ್ನು ತೊಳೆಯುವ ವಿಶಿಷ್ಟ ಸಂಪ್ರದಾಯದ "ಬಾಳ್ಗಚ್ಚು" ಪದ್ಧತಿಯನ್ನು ನಾವಿಲ್ಲಿ ಕಾಣಬಹುದಾಗಿದೆ. 

(ವಿವಿಧ ಮೂಲಗಳಿಂದ)
***********
ಕೆ.ಎ.ಸೌಮ್ಯ, ಮೈಸೂರು

**********
ಹಲ್ಮಿಡಿ ಶಾಸನದ ಚಾರಿತ್ರಿಕ, ಧಾರ್ಮಿಕ, ಸಾಮಾಜಿಕ ಸಂಗತಿಯನ್ನು ಕುರಿತು ಬರೆಯಿರಿ
***********
(ಎಂ.ಎ.ಕನ್ನಡ 2007)

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)