ರಸಗಳ ಸಂಖ್ಯೆಯನ್ನು ಕುರಿತು ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ನಡೆದಿರುವ ಚರ್ಚೆ

ಪೀಠಿಕೆ

ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ರಸ ಸಿದ್ದಾಂತಕ್ಕೆ ಅನನ್ಯವಾದ ಸ್ಥಾನವಿದೆ. ಭರತಮುನಿಯು ರಸ ಸಿದ್ಧಾಂತದ ಪ್ರಥಮ ಪ್ರವರ್ತಕ ಎನಿಸಿದ್ದಾನೆ‌. ಭರತನು ತನ್ನ ನಾಟ್ಯ ಶಾಸ್ತ್ರದಲ್ಲಿ 'ಈ ಮೂರುಲೋಕಗಳ ಭಾವದ ಅನುಕೀರ್ತನವೇ ನಾಟ್ಯ' ಎಂಬ ಒಂದು ಮಾತು ಹೇಳಿದ್ದಾನೆ. ನಾಟ್ಯದಂತೆ ಕಾವ್ಯವೂ ಮೂರು ಲೋಕಗಳ ಭಾವದ ಅನುಕೀರ್ತನವೇ ಆಗಿರುವುದರಿಂದ, ರಸ ಸಿದ್ಧಾಂತವನ್ನು ನಾಟಕದಂತೆಯೇ ಕಾವ್ಯಗಳಿಗೂ ಅನ್ವಯಿಸಿಕೊಳ್ಳಬಹುದು. 'ವಿಭಾವ, ಅನುಭಾವ, ವ್ಯಭಿಚಾರಿ (ಸಂಚಾರಿ)' ಭಾವಗಳ ಸಂಯೋಗದಿಂದ "ರಸ" ನಿಷ್ಪನ್ನವಾಗುತ್ತದೆ ಎಂದು ಭರತ ಹೇಳಿದ್ದಾನೆ. 

"ರಸ" ಎಂಬುದು ಒಂದು ಬಗೆಯ ಚಿತ್ತ ಸ್ಥಿತಿ. ಅದು ಮನಸ್ಸನ್ನು ಏಕಾಗ್ರಗೊಳಿಸಿ ಸ್ವಾಸ್ಥ್ಯವನ್ನು ತರುತ್ತದೆ. ನಂತರ ಆ ಸ್ವಾಸ್ಥ್ಯದ ಸ್ಥಿತಿಯಲ್ಲಿಯೇ ಮನಸ್ಸು ಸ್ವಲ್ಪ ಕಾಲ ನಿಲ್ಲುವಂತೆ ಮಾಡುತ್ತದೆ. ವೇದೋಪನಿಷತ್ತುಗಳಲ್ಲಿ ರಸವೆಂಬ ಪದಕ್ಕೆ ಆತ್ಮಸಾಕ್ಷಾತ್ಕಾರ ಎಂಬರ್ಥವಿದೆ. ಅತ್ಯಂತ ಸರಳವಾದ ಮಾತಿನಲ್ಲಿ ಹೇಳುವುದಾದರೆ ಸುಂದರವಾದ ಕಾವ್ಯವನ್ನು ಓದಿ, ನಮಗೆ ನಾವೇ ಪಡುವ ಸಂತೋಷವೇ "ರಸ". ಕಾವ್ಯರಸವು ಆನಂದಾತ್ಮಕ ಎಂಬ ಹೇಳಿಕೆಯು ತೈತ್ತರೀಯ ಉಪನಿಷಿತ್ತಿನ "ರಸೋ ವೈ ಸಃ" ಎಂಬ ವಾಕ್ಯದಲ್ಲಿದೆ. 

ರಸಗಳ ಸಂಖ್ಯೆ

ರಸಗಳ ಸಂಖ್ಯೆ ಎಷ್ಟು ಎಂಬ ವಿಚಾರವಾಗಿ ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ವಿಪುಲವಾದ ಚರ್ಚೆ ನಡೆದಿದೆ. ಭರತಮುನಿಯು ತನ್ನ ನಾಟ್ಯಶಾಸ್ತ್ರದಲ್ಲಿ ಎಂಟು ಸ್ಥಾಯೀಭಾವವನ್ನೂ, ಅವುಗಳಿಂದ ನಿಷ್ಪನ್ನವಾಗುವ ಎಂಟು ರಸಗಳನ್ನೂ ತಿಳಿಸಿದ್ದಾನೆ. ನಂತರ "ಶಾಂತ" ಎಂಬ ಮತ್ತೊಂದು ರಸ ಸೇರಿಕೊಂಡು 'ನವರಸಗಳು' ಎಂದಾಯ್ತು. ಅಷ್ಟಕ್ಕೇ ಬಿಡದೇ ನಮ್ಮ ಅಲಂಕಾರಿಕರು ಭಕ್ತಿ ರಸ, ವಾತ್ಸಲ್ಯ ರಸ ಮುಂತಾದ ರಸಗಳೂ ಇವೆಯೆಂದು ವಾದಿಸಿದ್ದಾರೆ. 

ಭರತನು ತನ್ನ ನಾಟ್ಯಶಾಸ್ತ್ರದಲ್ಲಿ ಹೀಗೆ ಹೇಳಿದ್ದಾನೆ. 

ಕ್ರ.ಸಂ       ಸ್ಥಾಯೀಭಾವ            ರಸ

  1.          ರತಿ ----------------- ಶೃಂಗಾರ‌ ರಸ
  2.          ಹಾಸ ----------------ಹಾಸ್ಯ ರಸ
  3.          ಶೋಕ ---------------- ಕರುಣ ರಸ
  4.           ಕ್ರೋಧ --------------- ರೌದ್ರ ರಸ
  5.           ಉತ್ಸಾಹ ---------------ವೀರ ರಸ
  6.           ಭಯ ----------------ಭಯಾನಕ ರಸ
  7.           ಜಿಗುಪ್ಸೆ -------------- ಭೀಭತ್ಸ ರಸ
  8.           ವಿಸ್ಮಯ -------------- ಅದ್ಭುತ ರಸ 

ಒಂಭತ್ತನೆಯದಾಗಿ ಶಾಂತರಸವನ್ನು ಕುರಿತು ಹೇಳುವ ಭಾಗಗಳು ನಾಟ್ಯಶಾಸ್ತ್ರದಲ್ಲಿ ದೊರೆತರೂ, ಅದು ಪ್ರಕ್ಷಿಪ್ತವೆಂದು ವಿದ್ವಾಂಸರು ಭಾವಿಸಿದ್ದಾರೆ. ಕಾಳಿದಾಸನ ಕಾಲದಲ್ಲಿಯೂ ಎಂಟೇ ರಸಗಳು ಪ್ರಸಿದ್ಧಿಯಾಗಿದ್ದವು.‌ 'ಅಮರ ಕೋಶ', ದಂಡಿಯ 'ಕಾವ್ಯಾದರ್ಶ'ಗಳಲ್ಲಿ ಕೂಡ ಎಂಟೇ ರಸಗಳು ಉಲ್ಲೇಖಿತವಾಗಿವೆ. 

ಆದರೆ "ಶಾಂತ" ಎಂಬ ಹೆಸರಿನ ರಸ ಇದೆಯೇ ಅಥವಾ ಇಲ್ಲವೇ ಎಂಬ ವಿಚಾರವಾಗಿ ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ದಿಗ್ಭ್ರಮೆಯಾಗುವಷ್ಟು ಚರ್ಚೆ ನಡೆದಿದೆ. 

ರಸಪ್ರಬೇಧಗಳು

1. ಶೃಂಗಾರ ರಸರಸಗಳ ಗುಂಪಿನಲ್ಲಿ ಶೃಂಗಾರ ರಸಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ರತಿಯೇ ಅದರ ಸ್ಥಾಯೀಭಾವ.‌ ಆ ಭಾವವು ಸಕಲ ಹೃದಯ ಸಂವಾದಿಯಾಗಿರುವುದರಿಂದ ಶೃಂಗಾರವು "ರಸರಾಜ" ಎಂಬ ಗೌರವಕ್ಕೆ ಪಾತ್ರವಾಗಿದೆ. ಕಾವ್ಯಗಳಲ್ಲಿ ಶೃಂಗಾರ ವರ್ಣನೆಗೇ ಮೊದಲ ಪ್ರಾಶಸ್ತ್ಯ. ‌ನೇಮಿಚಂದ್ರನು ತನ್ನ "ಲೀಲಾವತಿ" ಕಾವ್ಯದಲ್ಲಿ ಶೃಂಗಾರಕ್ಕೆ ಪೂರ್ಣವಾಗಿ ಒಲಿದು "ಸ್ತ್ರೀ ರೂಪಮೆ ರೂಪಂ... ಶೃಂಗಾರಮೆ ರಸಂ" ಎಂದು ಘೋಷಿಸಿದ್ದಾನೆ. 

ಶೃಂಗಾರ ರಸದಲ್ಲಿ ಎರಡು ವಿಧ : 
  1. ಸಂಭೋಗ ಶೃಂಗಾರ
  2. ವಿಪ್ರಲಂಬ ಶೃಂಗಾರ
ಸಂಭೋಗ ಶೃಂಗಾರದಲ್ಲಿ ನಲ್ಲ-ನಲ್ಲೆಯರ ಸಮಾಗಮದ ಧ್ವನಿ ಇದ್ದರೆ, ವಿಪ್ರಲಂಬ ಶೃಂಗಾರದಲ್ಲಿ ಅಗಲಿಕೆಯ ನೋವು ಇರುತ್ತದೆ. 

2. ಹಾಸ್ಯರಸ : ಹಾಸ್ಯರಸಕ್ಕೆ ಹಾಸವು ಸ್ಥಾಯಿಭಾವ. ಮಾನವ ಜೀವಿತದಲ್ಲಿ ರತಿಗೆ ಎಷ್ಟು ಪ್ರಾಧಾನ್ಯವೋ ಹಾಸಕ್ಕೂ ಅಷ್ಟೇ ಪ್ರಾಧಾನ್ಯವುಂಟು. ಶೃಂಗಾರದ ಅನುಕರಣವೇ ಹಾಸ್ಯ ಎಂದು ಭರತನು ಅಭಿಪ್ರಾಯಪಟ್ಟಿದ್ದಾನೆ. ಕುಮಾರವ್ಯಾಸನ 'ಕರ್ಣಾಟ ಭಾರ ಕಥಾಮಂಜರಿ'ಯಲ್ಲಿ ವಿರಾಟಪರ್ವದ ಉತ್ತರ ಕುಮಾರನ ಪ್ರಸಂಗದಲ್ಲಿ ಹಾಸ್ಯರಸವಿದೆ. ತಾನೇ ನಗುವುದು ಆತ್ಮಸ್ಥ, ಪರರನ್ನು ನಗಿಸುವುದು ಪರಸ್ಥ ಎಂದು ಭರತ ಹೇಳಿದ್ದಾನೆ‌.

3. ಕರುಣರಸ : ಕರುಣರಸಕ್ಕೆ ಶೋಕವು ಸ್ಥಾಯೀಭಾವ. ಕರುಣ ಎಂದ ಮತ್ತೊಬ್ಬರು ಸಂಕಷ್ಟದಲ್ಲಿದ್ದಾಗ ತೋರಿಸುವ ದಯೆ, ಅನುಕಂಪ ಎಂದು ಭ್ರಮಿಸಬಾರದು. ಕರುಣೆಯೇ ಬೇರೆ ಶೋಕಸ್ಥಾಯಿಯಾದ ಕರುಣರಸವೇ ಬೇರೆ. ಕರುಣರಸದ ಅನುಭವ ಕಾಲದಲ್ಲಿ ಹೃದಯವು ಅಧಿಕವಾಗಿ ಕರಗುತ್ತದೆ. ಸಂಸ್ಕೃತ ಕವಿಯಾದ ಭವಭೂತಿಯು "‌ಏಕೋ ರಸಃ ಕರುಣ ಏವ" ಎಂದು ಕರುಣವೊಂದೇ ರಸ ಎಂದು ಸೂಚಿಸುವ ಮಟ್ಟಿಗೆ ಹೋಗಿದ್ದಾನೆ. 

ಸೀತಾರಾಮರ ವಿಯೋಗದ ದುಃಖ, ಗಧಾಯುಧದಲ್ಲಿ ಬರುವ ದುರ್ಯೋಧನನ ಪ್ರಲಾಪ, ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಬರುವ ಚಂದ್ರಮತಿಯ ಪ್ರಲಾಪ, ಷಡಕ್ಷರದೇವನ ರಾಜಶೇಖರ ವಿಳಾಸದಲ್ಲಿ ಬರುವ ತಿರುಕೊಳವಿನಾಚಿಯ ರೋಧನ ಮುಂತಾದವು "ಕರುಣ ರಸ"ಕ್ಕೆ ಉದಾಹರಣೆಗಳು. 

4. ರೌದ್ರರಸ : ರೌದ್ರರಸಕ್ಕೆ ಕ್ರೋಧವೇ ಸ್ಥಾಯಿಭಾವ. ಇದರ ವಿಶೇಷತೆ ಏನೆಂದರೆ ಮೃದು ಸ್ವಭಾವದ ಸುಸಂಸ್ಕೃತರೂ ರೌದ್ರವನ್ನು ಸವಿಯಬಲ್ಲರು. ಆದರೆ ಕಥಾ ಪುರುಷರ ಕ್ರೋಧಕ್ಕೆ ಯೋಗ್ಯವಾದ ಕಾರಣವಿರಬೇಕು.  

ಉದಾಹರಣೆ
ಮಹಾಭಾರತದ ಕಥೆಯಲ್ಲಿ ದ್ರೌಪದಿಗೆ ದುಶ್ಯಾಸನ ಎಸಗಿದ ಅಪಮಾನವನ್ನು ಕಣ್ಣಾರೆ ಕಂಡ ಭೀಮನು, ಅಣ್ಣನ ಕಟ್ಟುಪಾಡಿಗೆ ಸಿಕ್ಕಿಬಿದ್ದು, ಅಲ್ಲಿಯೇ ಪ್ರತೀಕಾರ ಮಾಡಲು ಸಾಧ್ಯವಿಲ್ಲದೇ, ನಂತರ ಅವನ ರಕ್ತ ಕುಡಿಯುವೆನೆಂದು ಹೇಳಿದ ಅವನ ಪ್ರತಿಜ್ಞೆ ಎಲ್ಲರಿಗೂ ಅರ್ಥವಾಗುತ್ತದೆ. 

ಈ ಪ್ರಸಂಗವನ್ನು ಪಂಪಮಹಾಕವಿಯು ಹೀಗೆ ಬಣ್ಣಿಸಿದ್ದಾನೆ. "ದುಶ್ಯಾಸನನ ನೀಚತನ ಎಷ್ಟಿತ್ತೆಂದರೆ ವೃಕೋದರನಾದ ಭೀಮನು ಅವನ ಮೂಳೆಗಳನ್ನೇ ಕ್ರೋಧಾತಿಶಯದಿಂದ ತೇದು ಕುಡಿಯಬೇಕಾಗಿದ್ದಿತು. ಆದರೆ ಅವನು ಶತೃವಿನ ರಕ್ತದ ತಿಳಿನೀರನ್ನು ಮಾತ್ರ ಕುಡಿದು ಬಿಟ್ಟುಬಿಟ್ಟನು. ಯಾವ ಪರಿಯಲ್ಲಿ ನೋಡಿದರೂ ಭೀಮ ದೋಷಿಗನಲ್ಲ ಎಂದು ಎಲ್ಲರೂ ಕೊಂಡಾಡಿದರು" ಎಂದು ವರ್ಣಿಸಿದ್ದಾನೆ. ಇಲ್ಲಿ ಭೀಮನ ಕ್ರೋಧವು ಉಚಿತವಾದದ್ದು ಎಂದು ತಿಳಿಯಬೇಕು. 

5. ವೀರರಸ: ವೀರರಸಕ್ಕೆ ಉತ್ಸಾಹವು ಸ್ಥಾಯೀಭಾವ. ಉತ್ಸಾಹವು ಉದಾತ್ತರ ಭಾವ. ಭರತಮುನಿಯು ವೀರರಸವನ್ನು ಮೂರು ಬಗೆಯಾಗಿ ವಿಂಗಡಿಸಿದ್ದಾನೆ. 

  1. ದಾನವೀರ
  2. ಧರ್ಮವೀರ
  3. ಯುದ್ಧವೀರ
ವೀರರಸಕ್ಕೆ ಹಲವು ಮುಖಗಳಿವೆ. ಉತ್ಸಾಹವು ಯಾವ ಮುಖದಲ್ಲಿ ಕಾರ್ಯಪ್ರವೃತ್ತವಾಗಿರುತ್ತದೋ ಅದಕ್ಕೆ ತಕ್ಕ ರಸವು ಸೃಷ್ಟಿಯಾಗುತ್ತದೆ. 

ಉದಾ:
ದಾನಪ್ರವೃತ್ತವಾದಾಗ--- ದಾನವೀರ (ಕರ್ಣ)
ಧರ್ಮಪ್ರವೃತ್ತವಾದಾಗ-- ಧರ್ಮವೀರ (ಧರ್ಮರಾಯ)
ಯುದ್ಧಪ್ರವೃತ್ತವಾದಾಗ-- ಯುದ್ಧವೀರ (ಅರ್ಜುನ

ಇದಲ್ಲದೇ ದಯಾವೀರವೆಂಬ ಮತ್ತೊಂದು ರಸವೂ ಇದೆ. ಬುದ್ಧನ ಜಾತಕ ಕಥೆಗಳಲ್ಲಿ ದಯಾವೀರವನ್ನು ಆಸ್ವಾದಿಸಬಹುದಾಗಿದೆ. 

6. ಭಯಾನಕ ರಸ : ಭಯಾನಕ ರಸಕ್ಕೆ ಭಯವೇ ಸ್ಥಾಯೀಭಾವ. 'ಆಹಾರನಿದ್ರಾಭಯಮೈಥುನಂಚ ಸಾಮಾನ್ಯನೇತತ್ ಪಶುಭಿರ್ನರಾಣಾಂ' ಎಂದರೆ ಆಹಾರ, ನಿದ್ರೆ, ಭಯ, ಸಂತಾನೋತ್ಪತ್ತಿ ಇವು ನಾಲ್ಕು ಪಶುಗಳಿಗೂ, ಮನುಷ್ಯರಿಗೂ ಸಮಾನವಾಗಿದೆ ಎಂದು ಸುಭಾಷಿತಕಾರರು ಹೇಳಿದ್ದಾರೆ. 

ವೀರರಾದವರು ಭಯವನ್ನು ಗೆಲ್ಲಬೇಕು ಎಂದು ಹಾತೊರೆಯುತ್ತಾರೆ. ಹಾಗಾಗಿ ಪ್ರಾಕೃತ ಮನುಷ್ಯರು, ಸ್ತ್ರೀಯರು, ಪಶುಮೃಗಗಳನ್ನು ಕೇಂದ್ರವಾಗಿಟ್ಟುಕೊಂಡು ಭಯಾನಕ ರಸವನ್ನು ಚಿತ್ರಿಸುವುದು ರೂಢಿಗೆ ಬಂದಿದೆ. 

ಉದಾ: 'ಕರ್ನಾಟಕ ಶಾಕುಂತಲಾ ನಾಟಕ'ದ ಪದ್ಯವೊಂದರಲ್ಲಿ ದುಶ್ಯಂತನು ರಥದಲ್ಲಿ ಕುಳಿತು ಬಾಣ ಹೂಡಿ ಕಣ್ವಾಶ್ರಮದ ಮಾರ್ಗವಾಗಿ ಹುಲ್ಲೆಯೊಂದಕ್ಕೆ ಗುರಿಯಿಟ್ಟು ಬರುತ್ತಿರುವಾಗ, ತನ್ನನ್ನು ಕೊಲ್ಲುತ್ತಾರೆ ಎಂಬ ಹುಲ್ಲೆಯ ಮನಸ್ಥಿತಿಯಲ್ಲಿ ಭಯಾನಕ ರಸ ಮೂಡಿ ಬಂದಿದೆ

7. ಭೀಭತ್ಸ ರಸ : ಭೀಭತ್ಸ ರಸಕ್ಕೆ ಜಿಗುಪ್ಸೆಯೇ ಸ್ಥಾಯಿಭಾವ. ಜಿಗುಪ್ಸಾಮೂಲವಾದ ಭೀಭತ್ಸ, ರಸವಾಗಿ ಹೇಗೆ ಆಸ್ವಾದಿತವಾಗುತ್ತದೆ ಎಂಬ ಸಂಶಯ ಒಮ್ಮೊಮ್ಮೆ ತಲೆದೋರಬಹುದು. ಆದರ ಕರುಣ ರಸದಲ್ಲಿ ಆಸ್ವಾದವಿರುವಂತೆ ಇಲ್ಲಿಯೂ ಇದೆ. ಆದರೆ ಒಂದು ವ್ಯತ್ಯಾಸ ಎಂದರೆ, ಮನಸ್ಸು ಶೋಕದಲ್ಲಿ ಮಗ್ನವಾಗುವಷ್ಟು ತೀವ್ರವಾಗಿ ಜಿಗುಪ್ಸೆಯಲ್ಲಿ ಆಗಲಾರದು. ಹಾಗೆಯೇ ಕವಿಯು ಪ್ರತಿಭಾಶಾಲಿಯಾದರೆ, ವರ್ಣನೆಯನ್ನು ಜಾಳುಜಾಳು ಮಾಡದಿದ್ದರೆ, ಭೀಭತ್ಸರಸವನ್ನು ಹೃದಯ ಸ್ಪರ್ಶಿಯನ್ನಾಗಿಸಬಹುದು. 

ಉದಾಹರಣೆಗೆ: 
  • ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಕುವೆಂಪುರವರು ಮಾಡಿರುವ ಮಂಥರೆಯ ವರ್ಣನೆಯನ್ನು ಭೀಭತ್ಸ ರಸಕ್ಕೆ ಉದಾಹರಣೆಯಾಗಿ ಕೊಡಬಹುದು.
  • ಪಂಪನ ಆದಿಪುರಾಣದಲ್ಲಿ ಬರುವ ನೀಲಾಂಜನೆಯ ನೃತ್ಯ ಪ್ರಸಂಗದಲ್ಲಿ ಆದಿನಾಥನು ಆ ಅಪ್ಸರೆಯು ಕ್ಷಣಾರ್ಧದಲ್ಲಿ ಮಿಂಚಿ ಮರೆಯಾದದ್ದನ್ನು ಕಂಡು ವೈರಾಗ್ಯಪರನಾದನು. ಈ ಸಂದರ್ಭದಲ್ಲಿ ಅವನು ತನಗೆ ತಾನೇ ಹೇಳಿಕೊಳ್ಳುವ ಮಾತುಗಳು 'ವಿರಕ್ತಿ ಭೀಭತ್ಸ' ಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.
8. ಅದ್ಭುತ ರಸ :ಅದ್ಭು ರಸಕ್ಕೆ ವಿಸ್ಮಯವು ಸ್ಥಾಯೀಭಾವ. ಇದೂ ಸಹ ಶೃಂಗಾರ ರಸದಂತೆಯೇ ವ್ಯಾಪಕವಾದುದು. ಮನುಷ್ಯ ಹುಟ್ಟಿನಿಂದ ಮರಣದವರೆಗೆ ವಿಸ್ಮಯವನ್ನು ಕಾಣುತ್ತಿರುವುದೇ ಅದಕ್ಕೆ ಕಾರಣವಾಗಿದೆ. ಒಂದು ಸಂದರ್ಭದಲ್ಲಿ ಗೋಚರವಾಗುವ ರಸ ಯಾವುದೆಂದು ತೀರ್ಮಾನಿಸುವುದಕ್ಕೆ ಆಗದಿದ್ದಾಗ ಆ ರಸವು ಅದ್ಭುತ ರಸವಾಗಿರುತ್ತದೆಯಂತೆ.

ಪಂಪ ಮಹಾಕವಿಯು ಮಾಡುವ ಜಿನ ಶಿಶುವಿನ ಜನ್ಮಾಭಿಷೇಕದ ವರ್ಣನೆ, ಅಲ್ಲಿಯೇ ಬರುವ ಇಂದ್ರನ ಆನಂದ ನೃತ್ಯ, ಕುಮಾರವ್ಯಾಸನಲ್ಲಿ ಬರುವ ಕಿರಾತಾರ್ಜುನೀಯ ಕಥಾ ವೃತ್ತಾಂತ ಮುಂತಾದ ಸನ್ನಿವೇಶಗಳಲ್ಲಿ ಅದ್ಭುತ ರಸವು ಚಿತ್ತಾಕರ್ಷಕವಾಗಿ ಮೂಡಿಬಂದಿದೆ. ಕುವೆಂಪುರವರ ಸಾಗರೋಲ್ಲಂಘನದ ಚಿತ್ರಣ ಅದ್ಭುತ ರಸಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಅಲ್ಲದೇ 'ಶ್ರೀ ರಾಮಾಯಣ ದರ್ಶನಂ' ಅನ್ನು ಪೂರ್ಣವಾಗಿ ವ್ಯಾಪಿಸಿರುವ ರಸವೆಂದರೆ ಅದ್ಭುತ ರಸ ಎನ್ನಬಹುದು. ಹರಿಹರ ಕವಿಯ 'ಗಿರಿಜಾ ಕಲ್ಯಾಣ'ದ ಕಾಮದಹನ ಪ್ರಸಂಗದಲ್ಲಿ ಶಿವನ ಹಣೆಗಣ್ಣುರಿ ಹೇಗೆ ಮನ್ಮಥನನ್ನು ಆಹುತಿ ತೆಗೆದುಕೊಂಡಿತು ಎಂಬಲ್ಲಿ ಅದ್ಭುತವು ಅಮೋಘವಾಗಿ ಚಿತ್ರಿತವಾಗಿದೆ. 

9. ಶಾಂತ ಮತ್ತು ಇತರ ರಸಗಳು : ಶಾಂತ, ಭಕ್ತಿ, ವ್ಯಾತ್ಸಲ ಎಂಬ ರಸಗಳ ವಿಚಾರವನ್ನು ಇಲ್ಲಿ ಮಾಡಲಾಗಿದೆ. 'ಶಾಂತ'ಕ್ಕೆ ಶಮವೇ ಸ್ಥಾಯಿಭಾವ. ಜೈನಪುರಾಣಕಾರರು ಶಾಂತರಸಕ್ಕೆ ಮೊದಲ ಪ್ರಾಶಸ್ತ್ಯ ಕೊಟ್ಟಿದ್ದಾರೆ. ಎಲ್ಲೆಲ್ಲಿ ಹರಿದರೂ ನದಿಗಳು ಕೊನೆಗೊಮ್ಮೆ ಸಾಗರವನ್ನೇ ಸೇರುವಂತೆ, ಎಲ್ಲಾ ರಸಗಳೂ ಕೊನೆಗೊಮ್ಮೆ ಶಾಂತರಸದಲ್ಲಿ ವಿಲೀನವಾಗಿ ಬಿಡುತ್ತದೆ.

  • 'ಪ್ರೇಯಾನ್' ರಸಕ್ಕೆ ಸ್ನೇಹವೇ ಸ್ಥಾಯೀಭಾವ. ಕರ್ಣ, ದುರ್ಯೋಧನರ ಸ್ನೇಹ ಚಿತ್ರಣದಲ್ಲಿ ಪ್ರೇಯಾನ್ ರಸವಿದೆ.
  • "ಭಕ್ತಿ" ರಸಕ್ಕೆ ಭಕ್ತಿಯೇ ಸ್ಥಾಯೀಭಾವ. ವಚನ ಸಾಹಿತ್ಯ, ದಾಸ ಸಾಹಿತ್ಯ, ತೀರ್ಥಂಕರರ ಪುರಾಣಗಳಲ್ಲಿ ಭಕ್ತಿರಸ ತಾನೇತಾನಾಗಿ ಮೆರೆದಿದೆ. 
  • "ವಾತ್ಸಲ್ಯ" ರಸಕ್ಕೆ ವಾತ್ಸಲ್ಯವೇ ಸ್ಥಾಯೀಭಾವ. ಇದಕ್ಕೆ ದಾಸ ಸಾಹಿತ್ಯದಲ್ಲಿ ಸಾಕಷ್ಟು ಉದಾಹರಣೆಗಳು ದೊರೆಯುತ್ತದೆ. 

ಉಪಸಂಹಾರ

ರಸಗಳು ಎಷ್ಟು ಎಂಬುದನ್ನು ಕುರಿತು ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ವಿಪುಲವಾದ ಚರ್ಚೆ ನಡೆದಿದೆ. ಮೂಲಭೂತ ರಸಗಳು ನಾಲ್ಕು, ಜನ್ಮರಸಗಳು ನಾಲ್ಕು ಎಂಬ ಹಿನ್ನೆಲೆಯಲ್ಲಿ ಭರತನು ಎಂಟು ರಸಗಳನ್ನು ವಿವರಿಸಿದ್ದಾನೆ. ನಂತರ ಶಾಂತರಸವೂ ಸೇರಿ ನವರಸಗಳು ಎಂದಾಯಿತು. ಯಾವುದೇ ಕಾವ್ಯವು ಎಷ್ಟೆಷ್ಟು ಮುಖಗಳಲ್ಲಿ ಆಸ್ವಾದಯೋಗ್ಯವಾಗುತ್ತವೆ ಎಂಬುದನ್ನು ಈ ರಸಪ್ರಬೇಧಗಳು ನಮಗೆ ತೋರಿಸುತ್ತದೆ.

(ವಿವಿಧ ಮೂಲಗಳಿಂದ)
**********
ಕೆ.ಎ.ಸೌಮ್ಯ
ಮೈಸೂರು

**************
ರಸಗಳು ಎಷ್ಟು? ಅವುಗಳ ಸಂಖ್ಯೆಯನ್ನು ಕುರಿತು ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ನಡೆದಿರುವ ಚರ್ಚೆಯನ್ನು ಸಂಗ್ರಹಿಸಿ
**************
(ಎಂ.ಎ.ಕನ್ನಡ June 2007, June 2008, June 2010) 




ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)