ಪೌರಾಣಿಕ-ಲೇಖನ : "ಕುಂತಿ" published in PRERANA on Nov 2013
‘ಕುತೂಹಲ’ ಎನ್ನುವುದು ಮಾನವ ಸಹಜ ಗುಣ. ಎಲ್ಲಾ ವಿಷಯಗಳನ್ನು ತಿಳಿಯಬೇಕು ಎಂಬ ಮಾನವನ ಮಹತ್ವಾಕಾಂಕ್ಷೆಯೇ ಇಂದು ಸೃಷ್ಟಿಯ ರಹಸ್ಯವನ್ನು ಭೇದಿಸುವತ್ತ ಸಾಗಿದೆ. ಅದರಲ್ಲೂ ಗುಟ್ಟಾದ ವಿಷಯಗಳನ್ನು ತಿಳಿಯುವುದೆಂದರೆ ಮಾನವರಿಗೆ ಎಲ್ಲಿಲ್ಲದ ಕುತೂಹಲ. ಈ ಕುತೂಹಲ ಅತಿಯಾದರೆ ಆಗುವ ಅನಾಹುತವನ್ನು ಮಹಾಭಾರತದ “ಕುಂತಿ”ಯ ಮೂಲಕ ತಿಳಿಯಬಹುದು. ಕುಂತಿಭೋಜನ ಸಾಕು ಮಗಳಾದ ಕುಂತಿ ಒಂದು ಮಹತ್ತರ ಕಾರ್ಯಕ್ಕಾಗಿ ಜನ್ಮ ತಳೆದವಳು. ಹಸ್ತಿನಾವತಿಯ ಸಿಂಹಾಸನವನ್ನು ಕೌರವರಿಂದ ಮತ್ತೆ ಪಾಂಡುವಿನ ಮಕ್ಕಳಿಗೆ ಸಿಗುವಂತೆ ಮಾಡುವ ಪ್ರಭಾವೀ ಪಾತ್ರ ಅವಳದ್ದು. ಆದರೆ ಅವಳ ಜೀವನ ಅಷ್ಟೇ ದುಃಖದಾಯಕವೂ ಹೌದು. ಚಿಕ್ಕವಳಿದ್ದಾಗ ಅವಳ ತಂದೆಯ ಆಸ್ಥಾನಕ್ಕೆ ಬಂದ ದೂರ್ವಾಸ ಮುನಿಯವರನ್ನು ಆದರದಿಂದ ಉಪಚರಿಸಿದ ಪರಿಣಾಮ, ದೂರ್ವಾಸರು ಅವಳ ಸೇವೆಗೆ ಸಂತೃಪ್ತರಾಗಿ ಒಂದು ಮಂತ್ರೋಪದೇಶ ಮಾಡುತ್ತಾರೆ. ಅದರಂತೆ ಅವಳು ತನಗೆ ಇಷ್ಟವಾದ ಐದು ದೇವತೆಗಳನ್ನು ಪ್ರತ್ಯಕ್ಷ ಮಾಡಿಕೊಂಡು ಅವರಿಂದ ಮಕ್ಕಳನ್ನು ಪಡೆಯಬಹುದಾಗಿರುತ್ತದೆ. ದೂರ್ವಾಸರು ಅವಳ ಜೀವನದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ವರಗಳನ್ನು ನೀಡಿರುತ್ತಾರೆ. ಮುಂದೆ ಈ ವರಗಳಿಂದ ಕುಂತಿಗೆ ಬಹಳ ಪ್ರಯೋಜನವಾಗುತ್ತದೆ. ನಿಜ. ಆದರೆ ಈ ಮಂತ್ರಗಳನ್ನು ಹೇಳಿದರೆ ತನಗಿಷ್ಟವಾದ ದೇವರು ಪ್ರತ್ಯಕ್ಷನಾಗುತ್ತನೆಯೋ ಇಲ್ಲವೋ ಎಂಬ “ಕುತೂಹಲ”ವೇ ಕುಂತಿಯನ್ನು ಆಜೀವಪರ್ಯಂತ ದುಃಖಕ್ಕೆ ದೂಡುತ್ತದೆ. ಹುಡುಗಾಟಿಕೆಯ ವಯಸ್ಸಿನ ಕುಂತಿಯು ಸ...