Commitement Phobia- part 2 Published in VK 15.06.2017

ಲೇಖನ: " ಪ್ರೀತಿ ಪ್ರೇಮ ಓಕೆ.... ಮದುವೆಗೆ ನಾಟ್ ಓಕೆ"

          ಸುಮಾರು ವರ್ಷದ ಕೆಳಗೆ ಹೆಣ್ಣುಮಕ್ಕಳಿಗೆ ಇದ್ದ ಕನಸೊಂದೇ... ಒಬ್ಬ ಒಳ್ಳೆಯ ಹುಡುಗನನ್ನು ಮದುವೆಯಾಗಿ ಲೈಫಲ್ಲಿ ಸೆಟಲ್ ಆಗಿಬಿಡಬೇಕು ಎನ್ನುವುದು. ಹುಡುಗಿಯರ ಪ್ರಕಾರ ಲೈಫಲ್ಲಿ ಸೆಟಲ್ ಎಂದರೆ ಮದುವೆ ಅಂತಲೇ ಅರ್ಥವಿತ್ತು. ಆದರೆ ಈಗ ಕಾಲ ಬದಲಾಗಿದೆ. ವಯಸ್ಸುಇಪ್ಪತ್ತೈದು ದಾಟಿದರೂ ಯಾಕೋ ಹೆಣ್ಣುಮಕ್ಕಳು ಮದುವೆಗೆ ಮನಸ್ಸು ಮಾಡುತ್ತಿಲ್ಲ. ತಮ್ಮ ಓದಿಗೆ, ಕೆಲಸಕ್ಕೆ ಕೊಡುವ ಮಹತ್ವವನ್ನು ಅವರು ತಮ್ಮ ಮದುವೆಗೆ ನೀಡುತ್ತಿಲ್ಲ. ಮದುವೆ ಎಂದರೆ ಈಗ ಅವರಿಗೆ ತಮ್ಮ ಜೀವನದಲ್ಲಿ ನಡೆಯಲೇಬೇಕಾದ ಒಂದು ಪ್ರಕ್ರಿಯೆ ಆಗಿಲ್ಲ. ಅದಿಲ್ಲದೆಯೂ ಬದುಕಬಹುದು ಎಂದು ತೋರಿಸಲು ಹೊರಟಿದ್ದಾರೆ. ಸಾಮಾನ್ಯವಾಗಿ ಮಹಾನಗರಗಳಲ್ಲಿ ಒಂಟಿಯಾಗಿ ವಾಸಿಸುವ ಹೆಣ್ಣುಮಕ್ಕಳಿಗೆ ಧೈರ್ಯ, ಆತ್ಮವಿಶ್ವಾಸ ಜಾಸ್ತಿ. ತಾನೇ ದುಡಿದು ತಿನ್ನುವುದರಿಂದ ಮತ್ತು ತನ್ನ ಬಾಳನ್ನು ತಾನೇ ರೂಪಿಸಿಕೊಳ್ಳುವುದರಿಂದ ಬೇರೆ ಯಾರೋ ಬಂದು ತಮ್ಮ ಬಾಳು ಬೆಳಗುತ್ತಾರೆ ಎಂಬ ಮೂಢನಂಬಿಕೆ ಅವರಿಗಿಲ್ಲ. ಹಾಗಾದರೆ ಹೆಣ್ಣುಮಕ್ಕಳು ಗಂಡಸರ ಸಾಹಚರ್ಯವಿಲ್ಲದೇ ಒಂಟಿಯಾಗಿ ಬದುಕಲು ಹೊರಟಿದ್ದಾರೆಯೇ?
ಮದುವೆ ಮಾತ್ರ ಬೇಡ:
          ಹಾಗೇನೂ ಇಲ್ಲ. ಅವರು ಮದುವೆ ಮಾತ್ರ ಬೇಡ ಎನ್ನುತ್ತಿದ್ದಾರಷ್ಟೇ.. ಉಳಿದಂತೆ ತಮ್ಮ ಸಂಗಾತಿಯ ಕುರಿತ ಕನಸುಗಳು ಹಾಗೆಯೇ ಜೀವಂತವಾಗಿದೆ.. ಮದುವೆ ಬೇಡ ಎನ್ನುವ ಹುಡುಗಿಯರು ಯಾರೂ ಒಬ್ಬಂಟಿಯಾಗಿಲ್ಲ. ಅವರು ತಮ್ಮ ಗೆಳೆಯರೊಂದಿಗೆ ಲೀವ್ ಇನ್ ರಿಲೇಷನ್ ನಲ್ಲಿರುವುದು ಇದಕ್ಕೆ ಉದಾಹರಣೆ. ಅವರಿಗೆ ಸಂಗಾತಿ ಬೇಕು, ಅವನೊಟ್ಟಿಗಿನ ಬದುಕು ಬೇಕು, ಸಾಂಗತ್ಯದ ಸವಿ ಬೇಕು, ಆದರೆ ಬದ್ಧತೆ ಬೇಡ, ಜವಾಬ್ದಾರಿ ಬೇಡ.
          ಈಗಿನ ಯುವಜನತೆಯ ದೃಷ್ಟಿಕೋನಗಳೇ ಬೇರೆ. ಅವರು ತಮ್ಮ ತಾಯ್ತಂದೆಯರ ಹಾಗೆ ಒಬ್ಬನನ್ನೇ ಮದುವೆಯಾಗಿ ಕಷ್ಟವೋ ಸುಖವೋ ಅವನೊಟ್ಟಿಗೆ ಬಾಳು ಹಂಚಿಕೊಂಡು ಇರುವುದು ಅವರಿಗೆ ಇಷ್ಟವಾಗುತ್ತಿಲ್ಲ. ಮದುವೆ ಎಂದರೆ ನಮ್ಮ ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವ ಅದೃಷ್ಟದ ಪರೀಕ್ಷೆ ಅಂತ ಅವರು ಅಂದುಕೊಂಡಿಲ್ಲ. ಸರಿಯಾದವನು ಸಿಕ್ಕರೆ ಸರಿ, ಇಲ್ಲದಿದ್ದರೆ ನನ್ನ ಹಣೆಯ ಬರಹದಲ್ಲಿ ಬರೆದದ್ದು ಇದೇ ಅಂತ ಹೊಂದಿಕೊಂಡು ಹೋಗುವ ಮನಸ್ಥಿತಿ ಇಂದಿನ ಹೆಣ್ಣುಮಕ್ಕಳದಲ್ಲ. ಇವನು ಸರಿ ಹೋಗದಿದ್ದರೆ ಇವನನ್ನು ಬಿಟ್ಟು ಇನ್ನೊಬ್ಬನನ್ನು ಹುಡುಕಬಹುದಲ್ಲ ಅನ್ನುವುದು ಅವರ ವಾದ. ಕಟ್ಟಿಕೊಂಡ ಕಾರಣಕ್ಕೆ ಇಷ್ಟವಾಗದಿದ್ದರೂ ಜೀವನಪೂರ್ತಿ ಅವನೊಟ್ಟಿಗೆ ಕಳೆಯುವ ಅಗತ್ಯ ಅವರಿಗೆ ಕಾಣುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮದುವೆ ಎಂಬ ವ್ಯವಸ್ಥೆಯಲ್ಲಿಯೇ ಅವರಿಗೆ ನಂಬಿಕೆ ಮೂಡುತ್ತಿಲ್ಲ.
ಪುರುಷರದ್ದೇ ಅಧಿಪತ್ಯ
          ಯಾರೇನೇ ಹೇಳಲಿ, ಎಷ್ಟೇ ಬದಲಾಗಿದೆ ಎನ್ನಲಿ.. ಮದುವೆ ಎಂದರೆ ಈಗಲೂ ಸಹ ಪುರುಷರ ಅಧಿಪತ್ಯವೇ ಇರುವುದು. ಹುಡುಗಿಯರು ಮದುವೆಗೆ ಮೊದಲು ತಮಗಿಷ್ಟ ಬಂದಾಗ ನಿದ್ರಿಸುವುದು, ಸೂರ್ಯ ಹುಟ್ಟಿದ ಮೇಲೆ ಏಳುವುದು, ಅಡುಗೆ ಮಾಡಲು ಇಷ್ಟವಾಗದಿದ್ದರೆ ಹೊರಗೆ ತಿಂದು ಬರುವುದು ಅಂತೆಲ್ಲಾ ಅಭ್ಯಾಸವಾಗಿರುತ್ತದೆ. ಮದುವೆಯಾದ ತಕ್ಷಣ ಎಲ್ಲವನ್ನೂ ಒಂದು ಶಿಸ್ತಾಗಿ ಮಾಡಬೇಕಲ್ಲಪ್ಪ ಎಂಬ ಭಯ ಅವರನ್ನು ಕಾಡುತ್ತದೆ. ಹುಡುಗರೂ ಅಷ್ಟೇ... ತಮ್ಮ ಪ್ರೇಯಸಿ ಹೇಗಿದ್ದರೂ ಒಪ್ಪುತ್ತಾರೆ. ಆದರೆ ಹೆಂಡತಿಯಾದ ಮೇಲೆ ಅವಳು ತನ್ನಮ್ಮನ ಹಾಗೆಯೇ ಗೃಹಿಣಿಯಂತೆ ನಡೆದುಕೊಳ್ಳಲಿ ಎಂದೇ ಬಯಸುತ್ತಾರೆ. ಹೆಂಡತಿಯ ರೀತಿ,ನೀತಿ ಅಲ್ಲದೇ ಅವಳ ಉಡುಪಿನ ಮೇಲೆಯೂ ನಿಯಂತ್ರಣ ಹೇರಲು ಹೊರಡುತ್ತಾರೆ. ಇದು ನಮ್ಮ ಹೆಣ್ಣುಮಕ್ಕಳನ್ನು ತೀರಾ ಕೆರಳಿಸುತ್ತಿದೆ.  
          ಮೊದಲಾಗಿದ್ದರೆ ಆರ್ಥಿಕವಾಗಿ ಸಬಲರಲ್ಲದ ಕಾರಣ ಬೇರೆ ವಿಧಿಯಿಲ್ಲದೇ ಇದನ್ನು ಸಹಿಸುತ್ತಿದ್ದರು. ಆದರೀಗ ತಾವೇ ದುಡಿಯುತ್ತಿರುವುದರಿಂದ ಅವರ ಜೀವನದ ಬಗ್ಗೆ ಅವರಿಗೆ ಚಿಂತೆ ಇಲ್ಲ. ಹಾಗಾಗಿ ಕೇವಲ ದೈಹಿಕ ಸುಖಕ್ಕೋಸ್ಕರ ಮದುವೆಯಾಗಿ ತಮ್ಮ ಸ್ವಾತಂತ್ರವನ್ನು ಬಲಿಕೊಡಲು ಅವರು ಸಿದ್ಧರಿಲ್ಲ. ಉಡಲು, ತೊಡಲು, ಜೀವನ ನಡೆಸಲು ಬೇಕಾದಷ್ಟು ದುಡ್ಡು, ಧೈರ್ಯ ಜೊತೆಯಲ್ಲಿರುವಾಗ ಮದುವೆ ಯಾಕೆ ಬೇಕು ಅನ್ನುವುದು ಅವರ ಅಭಿಪ್ರಾಯ.
ಮದುವೆಯಿಂದಾಚೆಗೆ ಅವರ ಚಿತ್ತ
          ತಾವು ಮಾಡದ ತಪ್ಪಿಗೆ ಮಾನಸಿಕವಾಗಿ ಜರ್ಝರಿತರಾಗಿ ಜೀವನಪರ್ಯಂತ ನೋವು ಅನುಭವಿಸುವುದಕ್ಕಿಂತಲೂ ತಾತ್ಕಾಲಿಕವಾಗಿಯಾದರೂ ತಾವಿಷ್ಟ ಪಟ್ಟವನ ಜೊತೆಯಲ್ಲಿ ಇರುವುದು, ಬೇಡವಾದಾಗ ಸಂಬಂಧ ಸುಲಭವಾಗಿ ಕಳೆದುಕೊಳ್ಳುವ ಬಗ್ಗೆಯೇ ಅವರ ಗಮನ ಹರಿಯುವುದು ಸ್ವಾಭಾವಿಕವಾಗಿದೆ. ಇದು ಎಷ್ಟರಮಟ್ಟಿಗಿದೆ ಎಂದರೆ ಅವರ ಆಳವಾದ ಸುಪ್ತಪ್ರಜ್ಞೆಯಲ್ಲಿ ಮದುವೆಯೆಂದರೆ ಏನೋ ಭಯಾನಕ ಸಂಗತಿ ಎಂಬ ಭಯ ಪಟ್ಟುಹಿಡಿದು ಕುಳಿತುಬಿಟ್ಟಿದೆ.           ಒಟ್ಟಿನಲ್ಲಿ ನಮ್ಮ ಯುವಜನತೆ ಮದುವೆಯಿಂದ ವಿಮುಖರಾಗುತ್ತಿದ್ದು, ಸೂಕ್ತ ಸಮಯದಲ್ಲಿ ಇವರಿಗೆ ಸೂಕ್ತ ಸಲಹೆಯ ಅಗತ್ಯವಿದೆ. ಮದುವೆಯೆಂದರೆ ಕೇವಲ ಹೊಂದಾಣಿಕೆಯಲ್ಲ. ಅಲ್ಲಿಯೂ ಪ್ರೀತಿ-ಪ್ರೇಮ-ವಿಶ್ವಾಸಗಳಿವೆ ಎಂದು ಅವರಲ್ಲಿ ಅರಿವು ಮೂಡಿಸಬೇಕಾಗಿದೆ. ಕಾನೂನಿನ ಪ್ರಕಾರ ಮದುವೆಯಾದರೆ ಲೀವ್ ಇನ್ ರಿಲೇಷನ್ನಿಗಿಂತಲೂ ಹೆಚ್ಚಿನ ಭದ್ರತೆ ಇರುತ್ತದೆ ಎಂದು ತಿಳಿಸಿ ಅವರನ್ನು ಮತ್ತೊಮ್ಮೆ ಮದುವೆಯತ್ತ ಮನಸು ಮಾಡುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ.

           **********

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)