ಮತ್ತೊಂದು ಪ್ರಪಂಚ ನಿಜಕ್ಕೂ ಇದೆಯೇ?

ಒಂದು ಕತ್ತಲ ರಾತ್ರಿ.
          
ಒಬ್ಬಳು ಹುಡುಗಿ ಒಂಟಿಯಾಗಿ ಕಾರ್ ಡ್ರೈವ್ ಮಾಡುತ್ತಾ ಬರುತ್ತಿದ್ದಾಳೆ. ಇದ್ದಕ್ಕಿದ್ದಂತೆ ಕಾರಿನಲ್ಲಿದ್ದ ರೇಡಿಯೋದಲ್ಲಿ ಈಗ ನಾವಿರುವ ಭೂಮಿಯ ಪಕ್ಕದಲ್ಲೇ ಮತ್ತೊಂದು ಭೂಮಿ ಕಾಣಿಸಿಕೊಂಡಿರುವ ಬಗ್ಗೆ ಸುದ್ದಿ ಪ್ರಸಾರವಾಗುತ್ತೆ. ಹೌದಾ ಅಂತ ದಿಗ್ಭ್ರಮೆಯಿಂದ ಕಾರ್ ನಿಲ್ಲಿಸದೇ ಕಾರಿನ ಕಿಟಕಿಯಿಂದಾಚೆ ನೋಡ್ತಾಳೆ.

         
ನಿಜ!!!!

          
ಆಕಾಶದಲ್ಲಿ ನಮ್ಮ ಭೂಮಿಯದ್ದೇ ಪ್ರತಿರೂಪದ ಮತ್ತೊಂದು ಆಕಾಶಕಾಯ ಇರುತ್ತೆ. ಅದನ್ನೇ ನೋಡ್ತಾ ನೋಡ್ತಾ ಅರಿಯದೇ ಎದುರಿನಲ್ಲಿ ನಿಂತಿದ್ದ ಕಾರಿಗೆ ಗುದ್ದಿ ಬಿಡುತ್ತಾಳೆ. ಒಂದೇ ನಿಮಿಷದಲ್ಲಿ ಎದುರಿನ ಕಾರಿನಲ್ಲಿದ್ದ ಸಂಸಾರ ನುಚ್ಚು ನೂರಾಗಿ ಬಿಡುತ್ತೆ. ಹೆಂಡತಿ, ಮಗು ಮತ್ತು ಅವಳ ಹೊಟ್ಟೆಯಲ್ಲಿದ್ದ ಮಗುವನ್ನು ಕಳೆದುಕೊಂಡ ಗಂಡ ಒಬ್ಬನೇ ಅನಾಥನಾಗಿ ಆಸ್ಪತ್ರೆ ಸೇರುತ್ತಾನೆ. ಇವಳಿಗೆ ಜೈಲು ಶಿಕ್ಷೆ ಆಗುತ್ತದೆ. ಜೈಲಿನಿಂದ ಬಿಡುಗಡೆಯಾದ ಮೇಲೆ ಅಪಘಾತದಲ್ಲಿ ಬದುಕುಳಿದ ವ್ಯಕ್ತಿಯನ್ನು ಹುಡುಕಿ ಅವನ ವಿಶ್ವಾಸ ಸಂಪಾದಿಸುತ್ತಾಳೆ.       

          
ಅಷ್ಟರಲ್ಲಿ ಹೊಸದಾಗಿ ಪತ್ತೆಯಾಗಿರುವ ಭೂಮಿಯನ್ನು ಹೋಲುವ ಗ್ರಹಕ್ಕೆ ಹೋಗಲು ಒಂದು ಖಾಸಗಿ ಕಂಪೆನಿಯವರು ಪ್ರಬಂಧ ಸ್ಪರ್ಧೆಯನ್ನು ಇಡುತ್ತಾರೆ. ಅದರಲ್ಲಿ ಆಕೆ ಭಾಗವಹಿಸಿ ಗೆದ್ದು ಹೊಸ ಗ್ರಹಕ್ಕೆ ಹೋಗಲು ಟಿಕೆಟ್ ಪಡೆಯುತ್ತಾಳೆ. ಆಗ ಇನ್ನೊಂದು ಹೊಸ ವಿಷಯ ಗೊತ್ತಾಗುತ್ತದೆ. ಏನೆಂದರೆ ಹೊಸ ಗ್ರಹದಲ್ಲಿಯೂ ನಮ್ಮ ಭೂಮಿಯ ರೀತಿ ವಾತಾವರಣ ಇರುವುದಷ್ಟೇ ಅಲ್ಲ, ಭೂಮಿಯ ಮೇಲಿನ ವ್ಯಕ್ತಿಗಳ ರೀತಿಯೇ ಅಲ್ಲಿಯೂ ವ್ಯಕ್ತಿಗಳಿದ್ದಾರೆ.... ಅದೇ ಹೆಸರುಗಳು.. ಅದೇ ವ್ಯಕ್ತಿತ್ವಗಳು... ಒಂದು ರೀತಿಯಲ್ಲಿ ಹೊಸ ಭೂಮಿಯು ನಮ್ಮ ಭೂಮಿಯ ಕನ್ನಡಿಯ ಹಾಗಿನ ಪ್ರತಿರೂಪ ಎಂದು ತಿಳಿಯುತ್ತದೆ.

          
ಆದರೆ ಅಲ್ಲಿನ ಜೀವನಕ್ಕೂ ಇಲ್ಲಿನ ಜೀವನಕ್ಕೂ ಸ್ವಲ್ಪ ಮಟ್ಟಿಗೆ ಬದಲಾವಣೆ ಇರುವುದರಿಂದ ತಾನು ಭೂಮಿಯ ಮೇಲೆ ಅಪಘಾತ ಮಾಡಿದ ಹಾಗೆ, ಇನ್ನೊಂದು ಹೊಸ ಭೂಮಿಯಲ್ಲಿರುವ ತಾನು ಅಪಘಾತ ಮಾಡಿರುವುದಿಲ್ಲ, ಹಾಗಾದರೆ ವ್ಯಕ್ತಿಯ ಹೆಂಡತಿ ಮಕ್ಕಳು ಇನ್ನೊಂದು ಭೂಮಿಯಲ್ಲಿ ಜೀವಂತವಾಗಿರಬಹುದು ಎಂಬ ಆಶಯದಲ್ಲಿ ವ್ಯಕ್ತಿಗೆ ನಿಜ ವಿಷಯ ತಿಳಿಸಿ ಟಿಕೆಟ್ ಕೊಟ್ಟು ಅವನನ್ನು ಹೊಸ ಭೂಮಿಗೆ ಕಳಿಸುತ್ತಾಳೆ. ಮೂರು ತಿಂಗಳ ನಂತರ ಏನೋ ಕೆಲಸ ಮಾಡುತ್ತಿದ್ದ ಅವಳನ್ನು ಯಾರೋ ಕರೆದಂತಾಗುತ್ತದೆ. ತಿರುಗಿ ನೋಡಿದರೆ ಅವಳದ್ದೇ ಪ್ರತಿರೂಪಿ ಅಲ್ಲಿ ಅವಳ ಹಿಂದೆ ನಿಂತಿರುತ್ತಾಳೆ.....

          
ಇದು 2011 ರಲ್ಲಿ ಬಿಡುಗಡೆಯಾದ ಇಂಗ್ಲೀಷಿನ "Another Earth" ಎಂಬ ಸಿನೆಮಾದ ಕಥೆ. ಮೈ ರೋಮಾಂಚನಗೊಳ್ಳುವ ಕಥಾಹಂದರ ಹೊಂದಿರುವ ಸಿನೆಮಾದ ಕಥೆಯನ್ನು ಈಗ  ಹೇಳಿದ ಉದ್ದೇಶ ಏನೆಂದರೆ, ಈಗ ಭ್ರಹ್ಮಾಂಡದಲ್ಲಿ ನಿಜವಾಗಿಯೂ ನಮ್ಮ ಭೂಮಿಯನ್ನು ಹೋಲುವ ಗ್ರಹಗಳು ಪತ್ತೆಯಾಗಿವೆ

ಅದೂ ಒಂದಲ್ಲ ಬರೋಬ್ಬರಿ ಏಳು!!!!

          
ಅದು ಏಳು ಗ್ರಹಗಳನ್ನೊಳಗೊಂಡ ಒಂದು ಸೌರವ್ಯೂಹ. ಸೌರವ್ಯೂಹ ಭೂಮಿಯಿಂದ ಸುಮಾರು 40 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಪತ್ತೆಯಾಗಿದೆ. ನಮ್ಮ ಸೌರವ್ಯೂಹದ ಮಾದರಿಯಲ್ಲಿಯೇ ಒಂದು ಬೃಹತ್ ನಕ್ಷತ್ರದ ಸುತ್ತ ಏಳೂ ಗ್ರಹಗಳು ಸುತ್ತುತ್ತಿದೆಯಂತೆ ಗ್ರಹಗಳಲ್ಲಿ ನೀರಿದೆ.. 

ಏಳೂ ಗ್ರಹಗಳಲ್ಲಿ ಸಾಗರಗಳಿವೆ... 

ಅಲ್ಲದೇ ಜೀವಿಗಳಿಗೆ ವಾಸಯೋಗ್ಯ ಪರಿಸರವೂ ಇದೆಯಂತೆ.. ನಾಸಾದ ಬೃಹತ್ ಸಂಶೋಧನೆಯು ದಶಕಗಳ ಹಿಂದೆ ಆರಂಭವಾದ ಪರ್ಯಾಯ ಭೂಮಿ ಸಂಶೋಧನೆಗೆ ಮಹತ್ವದ ತಿರುವು ನೀಡುವ ಸಂಭವವಿದೆ.

          
ಮನುಷ್ಯ ಭೂಮಿಯ ಮೇಲಿನ ವಾತಾವರಣವನ್ನು ತನಗೆ ಬೇಕಾದ ಹಾಗೆ ಒಗ್ಗಿಸಿಕೊಂಡು ಬದುಕುವುದು ಕಲಿತ ನಂತರ ಮಾಡಿದ ಮೊದಲ ಕೆಲಸವೆಂದರೆ ಅಗಾಧ ವಿಶ್ವದಲ್ಲಿ ನಮ್ಮವರು ಯಾರಾದರೂ ಇದ್ದಾರೆಯೇ ಎಂದು ಹುಡುಕಿದ್ದು. ಅವನಿಗಂತೂ ಸದಾ ಕಾಣದ ಅನ್ಯ ಗ್ರಹ ಜೀವಿಗಳದ್ದೇ ಜಪ

ಅವು ನೋಡಲು ಹೇಗಿರಬಹುದು... ಏನು ತಿನ್ನಬಹುದು... ಹೇಗೆ ಮಲಗಬಹುದು... ಅಂತೆಲ್ಲಾ ಸಿಕ್ಕಾಪಟ್ಟೆ ಕುತೂಹಲ. ಪ್ರತ್ಯಕ್ಷವಾಗಿ ಕಾಣಲಾಗದಿದ್ದರೂ ಸದಾ ಅದರ ಕುರಿತೇ ಯೋಚಿಸುತ್ತಾ ತನ್ನ ಯೋಚನೆಗೆ ತಕ್ಕ ಆಕಾರ ಕೊಡುತ್ತಾ ಬಂದ. ಆದರೆ ಅವನು ಯೋಚಿಸಿದ ಅನ್ಯಗ್ರಹ ಜೀವಿಗಳು ಹೆಚ್ಚು ಕಡಿಮೆ ಮನುಷ್ಯನ ಆಕಾರದಲ್ಲಿಯೇ ಇವೆ. ಏನೋ ಒಂದು ಸ್ವಲ್ಪ ಹೆಚ್ಚು ಕಡಿಮೆ ಮಾಡಿರಬಹುದು

ಹೇಗೆಂದರೆ ಜೀವಿಗಳಿಗೆ ಒಂದು ಕಣ್ಣು, ನೂರು ಬಾಯಿ, ನಾಲ್ಕು ಕೈಗಳು ಹೀಗೆ ಬದಲಾವಣೆ ಮಾಡಿಕೊಂಡರೂ, ಮೂಲ ಮಾತ್ರ ಮನುಷ್ಯನ ಆಕಾರವನ್ನೇ ಹೋಲುವುದು ಮಾತ್ರ ಸತ್ಯ.

          
ಆದರೆ ಪ್ರಪಂಚದೆಲ್ಲೆಡೆ ಗಮನಿಸಿದಾಗ ಸೂಕ್ಷ್ಮ ಆಕಾರದಲ್ಲಿಯೂ ಜೀವಿಗಳಿವೆ. ಹಿಂದೆಂದೋ ಒಮ್ಮೆ ಸೂಕ್ಷ್ಮ ಜೀವಿಗಳ ಧೂಳು (cosmic dust) ನಮ್ಮ ಭೂಮಿಯ ಮೇಲೆ ಬಿದ್ದು ಜೀವಗಳ ಉಗಮವಾಯ್ತು ಎಂದು ವಿಜ್ಞಾನಿಗಳು ಹೇಳುತ್ತಾರೆ. ಧೂಳಿನಿಂದ ಇಲ್ಲಿ ಮನುಷ್ಯ, ಪ್ರಾಣಿಗಳು ಅಲ್ಲದೇ ಅಮೀಬಾದಂತಹ ಏಕಕೋಶೀಯ ಜೀವಿಗಳೂ ಹುಟ್ಟಿವೆ

ಅಂದ ಮೇಲೆ ಅನ್ಯಗ್ರಹ ಜೀವಿಗಳು ಕೇವಲ ಮಾನವನ ರೂಪದಲ್ಲಿಯೇ ಏಕಿರುತ್ತವೆ?

          
ಹೀಗೆ ಚಿಂತಿಸಲೂ ಒಂದು ಕಾರಣವಿದೆ. ಏನೆಂದರೆ ಭೂಮಿಯ ಮೇಲೆ ಕೋಟ್ಯಾನುಕೋಟಿ ಜೀವಿಗಳಿದ್ದರೂ ಮಾತನಾಡುವ, ಚಿಂತಿಸುವ ಶಕ್ತಿ ಇರುವುದು ಕೇವಲ ಮನುಷ್ಯನಿಗೆ ಮಾತ್ರ. ಹಾಗಾಗಿ ನಮಗಿಂತ ಬುದ್ಧಿಶಾಲಿಗಳಾಗಿರುವ ಅನ್ಯಗ್ರಹ ಜೀವಿಗಳು ಮನುಷ್ಯನ ರೂಪದಲ್ಲೇ ಇರಬೇಕು ಎನ್ನುವುದು ನಮ್ಮ ಬಲವಾದ ನಿರ್ಧಾರ

ಹಾಗಾಗಿ ಮನುಷ್ಯ ವಾಸಿಸಲು ಯೋಗ್ಯ ಪರಿಸರದ ಗ್ರಹ ಸಿಕ್ಕಿದೆ ಎಂದಾಗ ಅಲ್ಲಿಯೂ ನಮ್ಮಂತೆ ಮನುಷ್ಯರಿರಬಹುದೇ ಎಂಬ ಆಸೆ ಗರಿಗೆದರುತ್ತದೆ. ಅಲ್ಲಿಯೂ ನಮ್ಮ ಹಾಗೆಯೇ ಮನುಷ್ಯರು, ನಮ್ಮಂತೆಯೇ ಬದುಕುವ ರೀತಿ ನೀತಿಗಳು, ಅವರಿಗೂ ನಮ್ಮಂತೆಯೇ ಆಚಾರ ವಿಚಾರಗಳು ಇರಬಹುದೇ ಎಂದು ಯೋಚಿಸುವಾಗ "Another Earth" ನಂತಹ ಸಿನೆಮಾಗಳು ಮೈದಾಳುತ್ತವೆ.

          
ನಮ್ಮ ಅಕ್ಕ ಪಕ್ಕದವರನ್ನೇ ಸರಿಯಾಗಿ ಮಾತನಾಡಿಸದ ನಾವು ಎಷ್ಟೋ ಜ್ಯೋತಿರ್ವರ್ಷಗಳಷ್ಟು ದೂರು ಇರುವ ಯಾವುದೋ ಕಂಡು ಕಾಣದ ಗ್ರಹದಲ್ಲಿ ನಮ್ಮ ಹೆಜ್ಜೆ ಜಾಡನ್ನು ಅರಸುತ್ತೇವೆ..... 

ಅಲ್ಲಿ ನಮ್ಮಂತಹ ಜೀವಿಗಳು ಇರಲಿ ಬಿಡಲಿ, ನಮಗೆ ಏನು ಪ್ರಯೋಜನ ಎಂದು ಚಿಂತಿಸುವುದಿಲ್ಲ. ನಾವು ಅಲ್ಲಿಗೆ ಹೋಗುವ ಹಾಗಿಲ್ಲ, ಅವರು ಇಲ್ಲಿಗೆ ಬರುವ ಹಾಗಿಲ್ಲ... 

ನಾವು ಭೂಮಿಯಿಂದಾಚೆ ಹೋದ ಮೇಲೆ ವಾತಾವರಣ ಇಲ್ಲದೇ ಬದುಕಲು ಕಷ್ಟ ಪಡುವ ಹಾಗೆ, ಜೀವಿಗಳಿಗೂ ಭೂಮಿಯ ಮೇಲಿನ ಪರಿಸರ ಅವುಗಳ ಜೀವಕ್ಕೆ ಮಾರಕವಾಗಿರಬಹುದು... ಅದಕ್ಕೇ ಇದುವರೆಗೂ ಯಾವ ಜೀವಿಯೂ ಭೂಮಿಗೆ ಭೇಟಿ ನೀಡದೇ ಇರಬಹುದು...

          
ಎಲ್ಲವೂ ಕೇವಲ ನಮ್ಮ ಕಲ್ಪನೆಯಷ್ಟೇ.. 


ನಿಜ ವಿಷಯ ನಾವು ಅಲ್ಲಿಗೆ ಅಥವಾ ಅವರು ಇಲ್ಲಿಗೆ ಭೇಟಿ ಕೊಟ್ಟಾಗಲೇ ಗೊತ್ತಾಗುವುದು.. ಅಲ್ಲಿಯವರೆಗೂ ನಾವು ನಮ್ಮ ಕಲ್ಪನೆಯನ್ನು ಹರಿಯಬಿಡುತ್ತಲೇ ಇರೋಣ... ಅನ್ಯಗ್ರಹ ಜೀವಿಗಳ ಬಗ್ಗೆ ಸಿನೆಮಾ ತೆಗೆಯುತ್ತಲೇ ಇರೋಣ..

          
ಯಾರಿಗೆ ಗೊತ್ತು

ನಾವು ಮಾಡುವ ಸಿನೆಮಾವನ್ನು ಅನ್ಯಗ್ರಹ ಜೀವಿಗಳು ನಮ್ಮ ವೇಷದಲ್ಲಿಯೇ ಥಿಯೇಟರ್ ನಲ್ಲಿ ನಮ್ಮ ಮಧ್ಯೆಯೇ ಕುಳಿತು ವೀಕ್ಷಿಸಿರಬಹುದು.. ಅಯ್ಯೋ ಬುದ್ಧಿ ಇಲ್ಲದ ಪೆದ್ದುಗಳಿರಾ ಅಂತ ನಮ್ಮನ್ನು ಬೈದುಕೊಂಡಿರಬಹುದು.. ಕಲ್ಪನೆಗೇನು ಕಾಸು ಕೊಡಬೇಕೇ?



*************
-ಕೆ..ಸೌಮ್ಯ

Published in manasa April 2017

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)