ಲೇಖನ: "ನಡೆದಾಡುವ ಕಲ್ಲುಗಳು" (Sailing Stones: Death Valley)

         
         ಚಿಕ್ಕಂದಿನಿಂದ ನಾವು ಯಾವುದೇ ವಸ್ತುಗಳಾಗಲಿ ಅವು ಸ್ವಯಂ ಚಲಿಸುವುದಿಲ್ಲ, ಅವು ಚಲಿಸಲು ಅವುಗಳಿಗೆ ಹಿಂದಿನಿಂದ ಬಲಕೊಟ್ಟು ತಳ್ಳಬೇಕು ಅಂತ ಕಲಿತಿದ್ದೇವೆ. ಹಾಗಾಗಿ ಯಾವುದೇ ಒಂದು ವಸ್ತುವನ್ನು ಯಾವುದೇ ಜಾಗದಲ್ಲಿಟ್ಟರೂ ಅದು ಅಲ್ಲಿಯೇ ಇರುತ್ತದೆ ಎನ್ನುವ ಧೈರ್ಯ ನಮಗೆ. ಆದರೆ ಆ ವಸ್ತುಗಳು ನಾವಿಟ್ಟ ಜಾಗದಲ್ಲಿರದೇ ಬೇರೆ ಕಡೆ ಚಲಿಸಿದ್ದರೆ ನಮ್ಮ ಪ್ರತಿಕ್ರಿಯೆ ಹೇಗಿರಬಹುದು? ಸ್ವಯಂ ಚಲಿಸಲಾರದ ವಸ್ತುಗಳು ಯಾವುದೇ ಬಲವಿಲ್ಲದೇ ಚಲಿಸಿವೆ ಎಂದರೆ ದೆವ್ವ ಭೂತ ಎಂದು ಹೆದರುವವರೇ ಬಹಳ. ಆದರೆ ಎಲ್ಲವೂ ಮಾನವ ಅಂದುಕೊಂಡದ್ದಷ್ಟೇ ನಿಜವಾಗಿರುವುದಿಲ್ಲ. ಅವನ ಕಣ್ಣಿಗೆ ಕಾಣದ, ಅರಿವಿಗೆ ಬಾರದ ಅನೇಕ ವಿಷಯಗಳಿವೆ. ಅದರಲ್ಲಿ ಈ ಚಲಿಸುವ ಕಲ್ಲುಗಳ ವಿಷಯವೂ ಒಂದು.
          
          ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿ ಎಂಬಲ್ಲಿ ಈ ಘಟನೆ ನಡೆದಿದೆ.

         ಅವು ನಡೆದಾಡುವ ಕಲ್ಲುಗಳೆಂದೇ ಪ್ರಸಿದ್ಧಿ. ಅಲ್ಲಿನ ವಿಶಾಲವಾದ ಬಯಲಿನಲ್ಲಿ ಹರಡಿಕೊಂಡಿರುವ ಕಲ್ಲುಗಳು ಯಾವುದೇ ಹಿಂಬಲವಿಲ್ಲದೇ ತಮ್ಮ ಪಾಡಿಗೆ ತಾವು ಚಲಿಸತೊಡಗಿದ್ದು ಎಲ್ಲರಲ್ಲಿಯೂ ಅನುಮಾನವನ್ನಷ್ಟೇ ಅಲ್ಲ ಭಯವನ್ನೂ ಮೂಡಿಸಿತು. ಅಲ್ಲದೇ ಈ ಕಲ್ಲುಗಳು ಯಾವುದೇ ಪ್ರಾಣಿ ಅಥವಾ ಮನುಷ್ಯನ ನೆರವಿಲ್ಲದೇ ಒಂದೆಡೆಯಿಂದ ಮತ್ತೊಂದೆಡೆಗೆ ಚಲಿಸುತ್ತಿದ್ದುದು ಆತಂಕಕ್ಕೆ ಎಡೆ ಮಾಡಿತು. ನಾವು ಅಂದುಕೊಂಡದ್ದು ಆಗದೇ ಬೇರೇನೋ ಆದರೆ ಭಯವಾಗುವುದು ಸಹಜ ತಾನೇ?

          ಈ ಕುರಿತು 1900 ರಿಂದಲೇ ರಿಸರ್ಚ್ ಶುರುವಾಗಿದ್ದರೂ ಏನೂ ಸುಳಿವು ಸಿಕ್ಕಿರಲಿಲ್ಲ. ಅಲ್ಲದೇ ಈ ಕಲ್ಲುಗಳು ಚಲಿಸುವುದನ್ನು ಯಾರೂ ಕಣ್ಣಾರೆ ನೋಡಿರಲಿಲ್ಲ. ಕೇವಲ ಅವು ಇಟ್ಟ ಜಾಗದಲ್ಲಿ ಕಲ್ಲು ಇರುತ್ತಿರಲಿಲ್ಲ ಅಂತ ಗುರುತಿಸುತ್ತಿದ್ದರಷ್ಟೇ. ಜೊತೆಗೆ ಅವು ಚಲಿಸಿದ ಹಾದಿಯಲ್ಲಿ ಗುರುತು ಮೂಡಿಸುತ್ತಿದ್ದವಲ್ಲ. ಆದರೆ 2014ರ ಆಗಸ್ಟಿನಲ್ಲಿ ಒಂದು ವಿಡಿಯೋ ತುಣುಕು ಇದರ ಕುರಿತು ಬೆಳಕು ಚೆಲ್ಲಿತು. ಇದರ ನಂತರ ಚಲಿಸುವ ಕಲ್ಲಿನ ರಹಸ್ಯ ಬಯಲಾಯಿತು.

          ಬಾಬ್ ಶಾರ್ಪ್ ಎಂಬಾತ ಏಳು ವರ್ಷಗಳ ಕಾಲ ಈ ಕುರಿತು ಅಧ್ಯಯನ ನಡೆಸಿದ. ತಾನು ಗುರುತಿಸಿರುವ ಪ್ರತೀ ಕಲ್ಲಿಗೂ ಒಂದೊಂದು ಹೆಸರು ಕೊಟ್ಟು ಅವಳ ಮೂವ್ ಮೆಂಟ್ ವೀಕ್ಷಿಸಿದ. ಈ ಅಧ್ಯಯನದಲ್ಲಿ ಸಾಬೀತಾದದ್ದು ಇವುಗಳ ಚಲಿಸುವಿಕೆಯಲ್ಲಿ ಮಂಜಿನ ಪಾತ್ರವಿದೆ ಅಂತ. ಅಂದರೆ ಮಂಜು ಈ ಕಲ್ಲುಗಳನ್ನು ಮುಂದಕ್ಕೆ ತಳ್ಳುತ್ತಿತ್ತು ಎಂದರ್ಥವಲ್ಲ. ನಿಜವಾಗಿ ನಡೆಯುತ್ತಿದ್ದುದು ಏನೆಂದರೆ, ಈ ವಿಶಾಲವಾದ ಬಯಲಿನ ಮರಳಿನ ಮೇಲೆ ಛಳಿಗಾಲದಲ್ಲಿ ಒಂದು ಮಂಜಿನ ಪದರ ಆವರಿಸುತ್ತಿತ್ತು. ಬೇಸಿಗೆಯಲ್ಲಿ ಸೂರ್ಯನ ಬಿಸಿಲಿಗೆ ಮಂಜು ಕರಗಲಾರಂಭಿಸಿದಂತೆ ಅದರ ಮೇಲ್ಮೈಯಲ್ಲಿದ್ದ ಕಲ್ಲುಗಳು ಗಾಳಿ ಬೀಸಿದತ್ತ ಚಲಿಸುತ್ತಿದ್ದವು.

          ಸಾಮಾನ್ಯವಾಗಿ ತೆಳು ತೂಕದ ಕಲ್ಲುಗಳು ಹೆಚ್ಚು ದೂರ ಕ್ರಮಿಸುತ್ತಿದ್ದವು. ಏಕೆಂದರೆ ಏಳು ವರ್ಷದ ತನ್ನ ಅಧ್ಯಯನದಲ್ಲಿ ಆತ ಭಾರಿ ತೂಕದ ಎರಡು ಕಲ್ಲುಗಳನ್ನು ಇಟ್ಟು ಪರೀಕ್ಷಿಸಿದಾಗ ಒಂದು ಕಲ್ಲು ಐದು ವರ್ಷದ ನಂತರ ತನ್ನ ಪಯಣ ಆರಂಭಿಸಿದರೆ ಮತ್ತೊಂದು ಕಲ್ಲು ಸ್ವಲ್ಪವೂ ಅಲುಗಾಡಲೇ ಇಲ್ಲ. ಇದರ ಅರ್ಥ ಕಲ್ಲು ಹಗುರವಿದ್ದಷ್ಟೂ ಹೆಚ್ಚು ದೂರ ಚಲಿಸುತ್ತಿದ್ದವು. ಕಲ್ಲುಗಳು ಗಾಳಿಯ ವೇಗಕ್ಕೆ ತಕ್ಕಂತೆ ಕರಗುತ್ತಿರುವ ಮಂಜಿನಡಿ ಚಲಿಸುತ್ತಿದ್ದವು.  

          ಕೆಲವು ಕಲ್ಲುಗಳು ಕೆಲವೇ ಕೆಲವು ವರ್ಷಗಳಲ್ಲಿ ತಾವು ಇದ್ದಲ್ಲಿಂದ ಮುನ್ನೂರು ಅಡಿಗಳಷ್ಟು ಚಲಿಸಿರುವ ಉದಾಹರಣೆಗಳಿವೆ. ಇವೆಲ್ಲವೂ ನೇರವಾಗಿಯೇ ಚಲಿಸಿಲ್ಲ, ಅಂಕುಡೊಂಕಾಗಿ ಸಹ ಚಲಿಸಿವೆ. ಕಲ್ಲುಗಳ ತಳ ಒರಟಾಗಿದ್ದರೆ ನೇರಕ್ಕೆ ಮತ್ತು ಕೋಮಲವಾಗಿದ್ದರೆ ಆಗಿದ್ದರೆ ಅಡ್ಡಾದಿಡ್ಡಿ ಚಲಿಸಿವೆ. ಇದೊಂದು ವೈಜ್ಞಾನಿಕ ಪ್ರಕ್ರಿಯೆಯಾಗಿದೆ.

          ತೀರಾ ಇತ್ತೀಚಿನವರೆಗೂ ವಿಜ್ಞಾನಿಗಳಿಗೆ ಇದು ಬಿಡಿಸಲಾರದ ಕಗ್ಗಂಟಾಗಿತ್ತು. ವಿಜ್ಞಾನಿಗಳಿಗೆ ಗೊತ್ತು... ಭೂಮಿಯ ಪ್ರತೀ ಕಾರ್ಯಕ್ಕೂ ಒಂದು ಕಾರಣವಿದೆ ಅಂತ. ಆದರೆ ಯಾವುದೇ ಹೊರಗಿನ ಬಲ ಇಲ್ಲದೇ ತನ್ನ ಪಾಡಿಗೆ ತಾನು ಚಲಿಸುವ ಕಲ್ಲುಗಳ ಬಗ್ಗೆ ಅವರೇನೂ ಹೇಳಲು ಸಾಧ್ಯವಿರಲಿಲ್ಲ. ಅವರು ಇದು ದೆವ್ವ ಭೂತದ ಕೃತ್ಯವೆಂದು ಜನರನ್ನು ಮೂಢರನ್ನಾಗಿಸಲು ಸಾಧ್ಯವಿರಲಿಲ್ಲ. ಹಾಗಾಗಿ ಸತತ ಅಧ್ಯಯನ ಕೈಗೊಂಡು ಕಲ್ಲುಗಳಿಗೆ ಜಿಪಿಎಸ್ ಅಳವಡಿಸಿ ಅವುಗಳ ಚಲಿಸುವಕೆಗೆ ನಿಜವಾದ ಕಾರಣ ಕಂಡು ಹಿಡಿದು ಜಗತ್ತಿನ ಮುಂದಿಟ್ಟಿದ್ದಾರೆ.

          ಇದನ್ನು ತಿಳಿಯುವ ಮೊದಲು ನಮ್ಮ ಕಲ್ಪನಾ ಲೋಕದಲ್ಲಿ ಇದರ ಬಗ್ಗೆ ಕಂತೆ ಕಂತೆ ಕಥೆ ಕಟ್ಟಿದ್ದ ನಾವು ಈಗ ನಿಜ ತಿಳಿದ ಮೇಲೆ ಬಾಯ್ಮುಚ್ಚಿಕೊಳ್ಳುವಂತಾಗಿದೆ. ಪ್ರಕೃತಿಯ ಸುಂದರ ಆವಿಷ್ಕಾರದಲ್ಲಿ ಇದೂ ಒಂದು ಎಂದು ತಿಳಿದು ಖುಷಿ ಪಡುವುದಷ್ಟೇ ನಮಗೆ ಉಳಿದಿರುವುದು.

***************


Published in MANASA may 2017

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)