ರಸಗಳ ಸಂಖ್ಯೆಯನ್ನು ಕುರಿತು ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ನಡೆದಿರುವ ಚರ್ಚೆ
ಪೀಠಿಕೆ : ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ರಸ ಸಿದ್ದಾಂತಕ್ಕೆ ಅನನ್ಯವಾದ ಸ್ಥಾನವಿದೆ. ಭರತಮುನಿಯು ರಸ ಸಿದ್ಧಾಂತದ ಪ್ರಥಮ ಪ್ರವರ್ತಕ ಎನಿಸಿದ್ದಾನೆ. ಭರತನು ತನ್ನ ನಾಟ್ಯ ಶಾಸ್ತ್ರದಲ್ಲಿ 'ಈ ಮೂರುಲೋಕಗಳ ಭಾವದ ಅನುಕೀರ್ತನವೇ ನಾಟ್ಯ' ಎಂಬ ಒಂದು ಮಾತು ಹೇಳಿದ್ದಾನೆ. ನಾಟ್ಯದಂತೆ ಕಾವ್ಯವೂ ಮೂರು ಲೋಕಗಳ ಭಾವದ ಅನುಕೀರ್ತನವೇ ಆಗಿರುವುದರಿಂದ, ರಸ ಸಿದ್ಧಾಂತವನ್ನು ನಾಟಕದಂತೆಯೇ ಕಾವ್ಯಗಳಿಗೂ ಅನ್ವಯಿಸಿಕೊಳ್ಳಬಹುದು. 'ವಿಭಾವ, ಅನುಭಾವ, ವ್ಯಭಿಚಾರಿ (ಸಂಚಾರಿ)' ಭಾವಗಳ ಸಂಯೋಗದಿಂದ " ರಸ " ನಿಷ್ಪನ್ನವಾಗುತ್ತದೆ ಎಂದು ಭರತ ಹೇಳಿದ್ದಾನೆ. " ರಸ " ಎಂಬುದು ಒಂದು ಬಗೆಯ ಚಿತ್ತ ಸ್ಥಿತಿ. ಅದು ಮನಸ್ಸನ್ನು ಏಕಾಗ್ರಗೊಳಿಸಿ ಸ್ವಾಸ್ಥ್ಯವನ್ನು ತರುತ್ತದೆ. ನಂತರ ಆ ಸ್ವಾಸ್ಥ್ಯದ ಸ್ಥಿತಿಯಲ್ಲಿಯೇ ಮನಸ್ಸು ಸ್ವಲ್ಪ ಕಾಲ ನಿಲ್ಲುವಂತೆ ಮಾಡುತ್ತದೆ. ವೇದೋಪನಿಷತ್ತುಗಳಲ್ಲಿ ರಸವೆಂಬ ಪದಕ್ಕೆ ಆತ್ಮಸಾಕ್ಷಾತ್ಕಾರ ಎಂಬರ್ಥವಿದೆ. ಅತ್ಯಂತ ಸರಳವಾದ ಮಾತಿನಲ್ಲಿ ಹೇಳುವುದಾದರೆ ಸುಂದರವಾದ ಕಾವ್ಯವನ್ನು ಓದಿ, ನಮಗೆ ನಾವೇ ಪಡುವ ಸಂತೋಷವೇ " ರಸ ". ಕಾವ್ಯರಸವು ಆನಂದಾತ್ಮಕ ಎಂಬ ಹೇಳಿಕೆಯು ತೈತ್ತರೀಯ ಉಪನಿಷಿತ್ತಿನ " ರಸೋ ವೈ ಸಃ " ಎಂಬ ವಾಕ್ಯದಲ್ಲಿದೆ. ರಸಗಳ ಸಂಖ್ಯೆ : ರಸಗಳ ಸಂಖ್ಯೆ ಎಷ್ಟು ಎಂಬ ವಿಚಾರವಾಗಿ ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ವಿಪ...