ಕಪ್ಪೆ ಅರಭಟ್ಟನ ಶಾಸನ
ಪೀಠಿಕೆ : ಕಪ್ಪೆ ಅರಭಟ್ಟನ ಶಾಸನ ವಿಜಾಪುರ ಜಿಲ್ಲೆಯ ಬಾದಾಮಿ ತಾಲ್ಲೂಕಿಗೆ ಸಮೀಪದ ಬಂಡೆಗಲ್ಲಿನ ಮೇಲೆ ದೊರೆತಿದೆ. ಈ ಶಾಸನವು ಕನ್ನಡದಲ್ಲಿ ವಿರಳವಾಗಿ ದೊರೆಯುವ ಬಂಡೆಗಲ್ಲಿನ ಶಾಸನದಲ್ಲಿ ಒಂದಾಗಿದೆ. ಈ ಶಾಸನ ಹಾಕಿಸುವಾಗ ಯಾವ ರಾಜ ಆಡಳಿತ ನಡೆಸುತ್ತಿದ್ದ ಎಂಬ ಮಾಹಿತಿ ನಮಗೆ ಲಭ್ಯವಿಲ್ಲ. ಕನ್ನಡ ಭಾಷೆಯಲ್ಲಿರುವ ಈ ಶಾಸನ ಕಪ್ಪೆ ಅರಭಟ್ಟ ಎಂಬುವವನನ್ನು ಕೀರ್ತಿಸಿವೆ. ಇದು ಪದ್ಯವೇ ಅಥವಾ ಗದ್ಯವೇ ಎನ್ನುವುದರ ಬಗ್ಗೆ ಕೂಡ ಇನ್ನೂ ಚರ್ಚೆ ನಡೆಯುತ್ತಲೇ ಇದೆ. ಇದರಲ್ಲಿ ಪ್ರಾಚೀನ ಕನ್ನಡದ ಅವಶ್ಯ ಲಕ್ಷಣವಾದ ಪ್ರಾಸ ಇರದೇ ಇರುವುದರಿಂದ ಇದನ್ನು ಗದ್ಯವೆಂದೇ ತಿಳಿಯಬೇಕಾಗಿದೆ. ನಂತರ ಬರುವ ಮೂರು ತ್ರಿಪದಿಗಳಲ್ಲಿ ಕಪ್ಪೆ ಅರಭಟ್ಟನ ಸ್ವಭಾವ ಚಿತ್ರಣ ಮೂಡಿ ಬಂದಿದೆ. ಪ್ರಾಣಕ್ಕಿಂತಾ ಹೆಚ್ಚಾಗಿ ತಾನು ನಂಬಿಕೊಂಡು ಬಂದಿರುವ ಜೀವನ ಶ್ರದ್ಧೆ, ಸ್ವಾಭಿಮಾನವೇ ದೊಡ್ಡದು ಎಂದು ಅದರಂತೆ ಜೀವಿಸಿದ ವ್ಯಕ್ತಿಯ ಚಿತ್ರಣ ಇಲ್ಲಿದೆ. ಇದನ್ನು ನೋಡಿದರೆ ಈ ಶಾಸನ ಕಪ್ಪೆ ಅರಭಟ್ಟ ಬದುಕಿದ್ದಾಗ ಹಾಕಿಸಿದಂತೆ ಕಾಣುವುದಿಲ್ಲ. ಬಹುಶಃ ಅವನ ಮರಣದ ನಂತರ ಹಾಕಿಸಿರಬಹುದೆಂದು ತೋರುತ್ತದೆ. ಹಾಗಾಗಿ ಇದು ಪ್ರಶಸ್ತಿ ಶಾಸನವಲ್ಲ. ಇದೊಂದು ವೀರಗಲ್ಲು . ಶಾಸನದ ಕಾಲ ಸುಮಾರು ಕ್ರಿ.ಶ.7ನೇ ಶತಮಾನ . ಈ ಶಾಸನ ಪ್ರಕಟಿಸಿದವರು ಜೆ.ಎಫ್.ಫ್ಲೀಟ್ . ಕಪ್ಪೆ ಅರಭಟ್ಟನ ಶಾಸನದ ಮಹತ್ವ : ಕರ್ನಾಟಕದ ಪ್ರಾಚೀನ ಜನಜೀವನದಲ್ಲಿ ವೀರಜೀವನಕ್ಕೆ...